ರೈತರಿಗೆ ಬಂಪರ್ ಗಿಫ್ಟ್ ಕೊಟ್ಟ ಕುಮಾರಣ್ಣ..!!

07 May 2018 5:58 PM |
5827 Report

ಈ ಬಾರಿಯ ಚುನಾವಣೆ ಅತ್ಯಂತ ಮಹತ್ವದ ಚುನಾವಣೆ. ಕೇವಲ ಮತದಾನ ಮಾಡಿದರೆ ಸಾಲದು, ರಾಜ್ಯದ ಮುಂದಿನ ಭವಿಷ್ಯ ಹಾಗೂ ರಾಜ್ಯದ ಜನತೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವಂತಾಗಬೇಕೆಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ ಕುಮಾರಸ್ವಾಮಿ ಹೇಳಿದರು.

ನಗರದ ಸುಭಾಷ್‍ಚಂದ್ರ ಬೋಸ್ ಕ್ರೀಡಾಂಗಣದಲ್ಲಿ ಜೆಡಿಎಸ್ ಹಮ್ಮಿಕೊಂಡಿದ್ದ ವಿಕಾಸ ಪರ್ವ ಯಾತ್ರೆಯಲ್ಲಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಬಿ.ಹೆಚ್. ಹರೀಶ್ ಪರ ಮತಯಾಚಿಸಿ ಮಾತನಾಡಿದರು. 'ರಾಜ್ಯದ ಜನತೆ ನೆಮ್ಮದಿಯಿಂದ ಬದುಕುತ್ತಿಲ್ಲ. ಯುವಕರಿಗೆ ಉದ್ಯೋಗವಿಲ್ಲ. ಅಲ್ಪಸಂಖ್ಯಾತರಿಗೆ ರಕ್ಷಣೆಯಿಲ್ಲದಂತಾಗಿದೆ. ಚುನಾವಣೆ ಘೋಷಣೆಯಾಗುತ್ತಿದ್ದಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ರಾಜ್ಯಕ್ಕೆ ಬಂದು ಉದ್ದುದ್ದ ಭಾಷಣ ಮಾಡುತ್ತಿದ್ದಾರೆ. ಚುನಾವಣೆ ನಂತರ ಅವರು ನಿಮ್ಮ ಕಷ್ಟ ಕೇಳಲು ಬರುವುದಿಲ್ಲ ಎಂದರು. ಸಾಲಬಾಧೆಯಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳಬಾರದು. ರೈತರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುತ್ತಿದ್ದೇವೆ. ರೈತರು ಬೆಳೆದ 58 ಸಾವಿರ ಕೋಟಿ ಬೆಳೆ ನಷ್ಟವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ರೈತರ ನೆರವಿಗೆ ಬರುವುದೇ ನಮ್ಮ ಉದ್ದೇಶ ಎಂದರು.

ಸಿಎಂ ಸಿದ್ದರಾಮಯ್ಯ 8,160 ಕೋಟಿ ರೈತರ ಸಾಲಮನ್ನಾ ಮಾಡಿದ್ದೇವೆಂದು ಹೇಳುತ್ತಿದ್ದಾರೆ. ಇದುವರೆಗೂ ರೈತರ ಅಕೌಂಟ್‍ಗೆ ಹಣ ಬಂದಿಲ್ಲ. ಜೂನ್ ತಿಂಗಳಲ್ಲಿ ಸಾಲ ತಿರುವಳಿ ಸಂದರ್ಭದಲ್ಲಿ ಸಾಲಮನ್ನಾ ಮಾಡುವುದಾಗಿ ಹೇಳುತ್ತಿದ್ದಾರೆ. ಆಗ ಸಿದ್ದರಾಮಯ್ಯ ಸರ್ಕಾರ ಇರುತ್ತಾ ಎಂದು ಪ್ರಶ್ನಿಸಿದರು. ಬಿ.ಎಸ್. ಯಡಿಯೂರಪ್ಪ ಚುನಾವಣೆ ಫಲಿತಾಂಶಕ್ಕೂ ಮುನ್ನವೇ ಮೇ.17ರಂದು ಕಠೀರವ ಕ್ರೀಡಾಂಗಣದಲ್ಲಿ ಪ್ರಮಾಣವಚನ ಸ್ವೀಕರಿಸುತ್ತೇವೆ ಎನ್ನುತ್ತಿದ್ದಾರೆ. ಸಿ.ಎಂ ಸಿದ್ದರಾಮಯ್ಯ ತಾವೇ ಮುಂದಿನ ಮುಖ್ಯಮಂತ್ರಿ ಎಂದು ಸ್ವಯಂ ಘೋಷಿಸಿಕೊಂಡಿದ್ದಾರೆ. ನಾನೆಲ್ಲೂ ಸಿ.ಎಂ ಆಗುತ್ತೇನೆಂದು ಹೇಳಿಲ್ಲ ಎಂದ ಅವರು, ಜೆಡಿಎಸ್‍ಗೆ ಒಂದು ಬಾರಿ ಅಧಿಕಾರ ಕೊಡಿ. ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ರಾಷ್ಟ್ರೀಕೃತ ಮತ್ತು ಸಹಕಾರಿ ಬ್ಯಾಂಕ್‍ನಲ್ಲಿರುವ ರೈತರ ಸಾಲಮನ್ನಾ ಹಾಗೂ ಸ್ತ್ರೀಶಕ್ತಿ ಸಂಘಗಳಲ್ಲಿರುವ 4,300 ಕೋಟಿ ಮಹಿಳೆಯರ ಸಾಲಮನ್ನಾ ಮಾಡುವುದಾಗಿ ತಿಳಿಸಿದರು. ಕೃಷಿಸಾಲ, ಕೃಷಿನೀತಿ, ಕಾಫಿಬೆಳೆಗಾರರ ಹಿತಕಾಯುವುದರೊಂದಿಗೆ ಸ್ವಸಹಾಯ ಗುಂಪುಗಳ ಮೂಲಕ ಗುಡಿ ಕೈಗಾರಿಕೆ ಉತ್ತೇಜನ, 65 ವರ್ಷ ಮೇಲ್ಪಟ್ಟ ಹಿರಿಯರಿಗೆ ತಿಂಗಳಿಗೆ ಐದು ಸಾವಿರ ಪಿಂಚಣಿ, ಗರ್ಭಿಣಿಯರಿಗೆ ಪೌಷ್ಠಿಕ ಆಹಾರ, ಆರೈಕೆಗೆ ಆರು ತಿಂಗಳಿಂದ 12 ತಿಂಗಳ ವರೆಗೆ 36 ಸಾವಿರ, ಐದು ಸಾವಿರಕ್ಕಿಂತ ಕಡಿಮೆ ಆದಾಯದವರಿಗೆ ಜೀವನ ಆಧಾರಕ್ಕೆ ತಿಂಗಳಿಗೆ ಐದು ಸಾವಿರ ರೂ. ನೀಡಲಾಗುವುದು ಎಂದರು.

Edited By

Shruthi G

Reported By

hdk fans

Comments