ಸರ್ಕಾರ ರಚನೆ ಬಗ್ಗೆ ಅಚ್ಚರಿ ಸುಳಿವು ಕೊಟ್ಟ ಎಚ್'ಡಿಕೆ

ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜ್ಯ ರಾಜಕೀಯದ ಕಾವು ಹೆಚ್ಚುತ್ತಿದೆ. ಈ ಚುನಾವಣೆಯಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬರುವುದು ಖಚಿತ. ಸಮೀಕ್ಷೆಗಳು ಹೇಳುವ ಪ್ರಕಾರ ನಮಗೆ 43 ಸ್ಥಾನಗಳು ಬಂದರೆ, ನಮ್ಮನ್ನು ಬಿಟ್ಟು ಬೇರೆಯವರು ಅಧಿಕಾರ ಮಾಡಲು ಸಾಧ್ಯವಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.
ಇಲ್ಲಿನ ಜಿಲ್ಲಾ ಆಟದ ಮೈದಾನದಲ್ಲಿ ನಡೆದ ಚುನಾವಣಾ ಪ್ರಚಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದ ಆರೂವರೆ ಕೋಟಿ ಜನರ ಹಿತರಕ್ಷಣೆಗಾಗಿ ಕಾರ್ಯಕ್ರಮ ರೂಪಿಸಲಾಗಿದೆ. ಇವುಗಳನ್ನು ಪೂರೈಸಲು ಯಾರು ಒಪ್ಪಿಕೊಳ್ಳುತ್ತಾರೋ ಅವರಿಗೆ ನಮ್ಮ ಬೆಂಬಲ ಸೂಚಿಸಲಾಗುವುದು. ಈಗ ಜೆಡಿಎಸ್ ಹಾಗೂ ನಮ್ಮ ಬಗ್ಗೆ ಹಗುರವಾಗಿ ಮಾತನಾಡುವವರು ಆಗ ನಮ್ಮ ಮನೆ ಬಾಗಿಲಿಗೇ ಬರುತ್ತಾರೆ. ನಾನು ಒಮ್ಮೆ ಮುಖ್ಯಮಂತ್ರಿ ಆಗಿದ್ದೇನೆ. ಮತ್ತೆ ಆಗುವ ಹುಚ್ಚಿಲ್ಲ, ನಮಗೆ ಅಧಿಕಾರ ಕೊಡಿ ಎಂದು ಕೇಳುತ್ತಿದ್ದೇವೆ. ನಾನು ಮೆರೆಯಲು ಅಲ್ಲ. ಜೆಡಿಎಸ್‌ಗೆ ಪೂರ್ಣ ಬಹುಮತ ಕೊಡಿ, ನಾವು ಯಾರ ಮನೆ ಬಾಗಿಲು ತಟ್ಟುವುದಿಲ್ಲ ಎಂದು ಕುಮಾರಸ್ವಾಮಿ ಅವರು ಹೇಳಿದರು. ಸಹಕಾರ ಬ್ಯಾಂಕ್ ಮತ್ತು ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿನ ರೈತರ ಎಲ್ಲ ಸಾಲ ಹಾಗೂ ಸ್ತ್ರೀಶಕ್ತಿ ಸ್ವಸಹಾಯ ಸಂಘಗಳ ೪೩೦೦ ಕೋಟಿ ರು. ಸಾಲಮನ್ನಾ ಮಾಡ ಬೇಕು. ನಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಅಳವಡಿ ಸಿರುವ 65 ವರ್ಷ ಮೇಲ್ಪಟ್ಟವರಿಗೆ ಪ್ರತಿ ತಿಂಗಳು 5 ಸಾವಿರ ರು ಮಾಸಾಶನ, ಗರ್ಭಿಣಿ ತಾಯಿ ಮತ್ತು ಮಗುವಿಗೆ ಪೌಷ್ಟಿಕ ಆಹಾರಕ್ಕಾಗಿ ಪ್ರತಿ ತಿಂಗಳು 6 ಸಾವಿರ ರು,5 ಸಾವಿರಕ್ಕಿಂತ ಕಡಿಮೆ ಆದಾಯ ಇರುವ ಕುಟುಂಬದ ಹೆಣ್ಣು ಮಕ್ಕಳಿಗೆ 2 ಸಾವಿರ ನೆರವು ನೀಡುವ ನಮ್ಮ ಕಾರ್ಯಕ್ರಮಗಳನ್ನು ಒಪ್ಪಿಕೊಳ್ಳಬೇಕು ಎಂದರು.
Comments