ಅಪ್ಪನ ಬಗ್ಗೆ ಮಾತನಾಡಿದ ರಾಹುಲ್ ಗಾಂಧಿಗೆ ತಿರುಗೇಟು ಕೊಟ್ಟ ಎಚ್ ಡಿಕೆ
ಜಿಡಿಎಸ್ ಪಕ್ಷ ಇರುವುದು ಆರೂವರೆ ಕೋಟಿ ಮಂದಿ ಕನ್ನಡಿಗರ ಪರ, ನಮ್ಮ ಒಪ್ಪಂದ ಇರುವುದು ರಾಜ್ಯದ ಮತದಾರರ ಜೊತೆ' ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ತಿರುಗೇಟು ನೀಡಿದ್ದಾರೆ.
ಪಟ್ಟಣದಲ್ಲಿ ಜೆಡಿಎಸ್ ಅಭ್ಯರ್ಥಿ ಬಿ.ಡಿ.ಪಾಟೀಲ್ ಪರ ನಡೆದ ಚುನಾವಣೆ ಪ್ರಚಾರ ಸಭೆಯಲ್ಲಿ ಡೊಳ್ಳು ಬಾರಿಸಿ ಉದ್ಘಾಟಿಸಿ ಮಾತನಾಡಿದರು. ಜೆಡಿಎಸ್ ಅಧ್ಯಕ್ಷ ದೇವೇಗೌಡರು ಹಾಗೂ ಜೆಡಿಎಸ್ ಪಕ್ಷ ಯಾರ ಪರ ಎಂಬ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರಶ್ನೆ ಕೇಳಿದ್ದಾರೆ. ದೇವೇಗೌಡರು ಹಾಗೂ ಜೆಡಿಎಸ್ ಪಕ್ಷ ಕಾಂಗ್ರೆಸ್ ಪಕ್ಷದ ಜೊತೆಯೂ ಇಲ್ಲ, ಬಿಜೆಪಿ ಜೊತೆಯೂ ಇಲ್ಲ. ಜೆಡಿಎಸ್ ಪಕ್ಷ ಇರುವುದು ರಾಜ್ಯದ ಆರೂವರೆ ಕೋಟಿ ಜನ ಕನ್ನಡಿಗರ ಕಡೆಗೆ. ಪದೇ, ಪದೇ ಜೆಡಿಎಸ್ ಪಕ್ಷದ ನಡವಳಿಕೆ ಬಗ್ಗೆ ತಿಳಿವಳಿಕೆ ಇಲ್ಲದೆ ಮಾತನಾಡಬೇಡಿ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ. ಕಾಂಗ್ರೆಸ್ ಮುಖಂಡರಿಗೆ ಜೆಡಿಎಸ್‌ಗೆ ಪ್ರಶ್ನೆ ಮಾಡುವ ನೈತಿಕತೆ ಇಲ್ಲ. ಅಲ್ಪಸಂಖ್ಯಾತರ ಮತ ಸೆಳೆಯಲು ಜೆಡಿಎಸ್ ಬಿಜೆಪಿ ಜೊತೆ ಒಳ ಒಪ್ಪಂದ ಮಾಡಿಕೊಂಡಿದೆ ಎಂದು ಕಾಂಗ್ರೆಸ್ಸಿನವರು ಹೇಳುತ್ತ ಹೊರಟಿದ್ದಾರೆ. ಆದರೆ ನಾವು ಯಾರ ಜೊತೆಯೂ ಒಪ್ಪಂದ ಮಾಡಿಕೊಂಡಿಲ್ಲ. ನಮ್ಮ ಒಪ್ಪಂದ ರಾಜ್ಯದ ಮತದಾರರ ಜೊತೆ ಮಾತ್ರ ಎಂದು ಸ್ಪಷ್ಟಪಡಿಸಿದರು. ಜೆಡಿಎಸ್ ಅಧಿಕಾರಕ್ಕೆ ಬಂದಲ್ಲಿ ಉಚಿತ ಅಕ್ಕಿ ನೀಡುವುದನ್ನು ತೆಗೆದು ಹಾಕುತ್ತಾರೆ ಎಂಬ ಭಾವನೆಯನ್ನು ಎದುರಾಳಿಗಳು ಜನರ ಮನಸ್ಸಲ್ಲಿ ಮೂಡಿಸುತ್ತಿದ್ದಾರೆ. ಆದರೆ ಜೆಡಿಎಸ್ ಅಧಿಕಾರಕ್ಕೆ ಬಂದರೆ ಉಚಿತ ಅಕ್ಕಿಯೊಂದಿಗೆ ಇನ್ನೂ ಹೆಚ್ಚಿನ ಕಾರ್ಯಕ್ರಮ ಬಡವರಿಗಾಗಿ ಜಾರಿಗೊಳಿಸಲಾಗುತ್ತದೆ ಎಂದು ಹೇಳಿದರು. ರಾಜ್ಯದಲ್ಲಿ ಬಡವರು ಪಡಿತರ ಅಕ್ಕಿ ಪಡೆಯಲು ದಿನಗಟ್ಟಲೆ ಸರದಿಯಲ್ಲಿ ನಿಲ್ಲಬೇಕು. ಒಂದು ದಿನ ಹೆಬ್ಬೆಟ್ಟು ಒತ್ತಿ ಬರಬೇಕು. ಆದರೆ, ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ರೇಷನ್ ಮೂಲಕ ಅಕ್ಕಿ ಪಡೆಯಲು ಹೆಬ್ಬೆಟ್ಟು ಪದ್ಧತಿಯನ್ನು ರದ್ದುಗೊಳಿಸಿ, ರೇಷನ್ ಅಂಗಡಿಗೆ ಹೋದ ತಕ್ಷಣ ಅಕ್ಕಿ ಸಿಗುವಂತೆ ಯೋಜನೆ ರೂಪಿಸ ಲಾಗುತ್ತದೆ ಎಂದರು.
Comments