ಆಟೋ ಚಾಲಕರು ಹೆಚ್ಚು ಹಣ ವಸೂಲಿ ಮಾಡಿದರೆ ಕ್ರಮ...ಪೋಲೀಸರ ಎಚ್ಚರಿಕೆ





ನಗರದ ಟಿಬಿ ವೃತ್ತದ ಬಳಿ ಇರುವ ಸರ್ಕಾರಿ ತಾಯಿ ಮಗು ಆಸ್ಪತ್ರೆಗೆ ರೋಗಿಗಳನ್ನು ಕರೆದೊಯ್ಯುವ ಆಟೋ ರಿಕ್ಷಾ ಚಾಲಕರು 4೦ ರೂ. ಮಾತ್ರ ಪಡೆಯಬೇಕು, ಹೆಚ್ಚುವರಿ ಹಣ ವಸೂಲಿ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ನಗರ ಪೋಲೀಸ್ ಠಾಣೆ ಸಬ್ ಇನ್ಸ್ ಪೆಕ್ಟರ್ ಬಿ.ಕೆ.ಪಾಟಿಲ್ ಎಚ್ಚರಿಕೆ ನೀಡಿದರು. ನಗರ ಪೋಲೀಸ್ ಠಾಣೆಯಲ್ಲಿ ಆಟೋ ರಿಕ್ಷಾ ಚಾಲಕರೊಂದಿಗೆ ಗುರುವಾರ ನಡೆಸಿದ ರಸ್ತೆ ಸುರಕ್ಷಾ ಸಪ್ತಾಹದಲ್ಲಿ ಮಾತನಾಡಿದರು. ಹಳೇ ಬಸ್ ನಿಲ್ದಾಣದ ಸಮೀಪವಿದ್ದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ನಗರದಿಂದ ಹೊರವಲಯಕ್ಕೆ ಸ್ಥಳಾಂತರಗೊಂಡಿದೆ, ಇದನ್ನು ಬಂಡವಾಳ ಮಾಡಿಕೊಂಡು ಕೆಲ ಆಟೋ ರಿಕ್ಷಾ ಚಾಲಕರು ರೋಗಿಗಳಿಂದ ಹೆಚ್ಚಿನ ಹಣ ವಸೂಲಿ ಮಾಡುವ ಕುರಿತು ಆರೋಪ ಕೇಳಿಬಂದಿದೆ, ಆ ನಿಟ್ಟಿನಲ್ಲಿ ನಗರದಲ್ಲಿರುವ ಎಲ್ಲ ಆಟೋ ಚಾಲಕರಿಗೆ ಕಡ್ಡಾಯವಾಗಿ 4೦ ರೂ. ಪಡೆಯುವ ನಿಯಮ ಮಾಡಲಾಗಿದೆ. ಇದನ್ನು ಮೀರಿ ಹೆಚ್ಚು ಹಣ ಪಡೆದವರ ಬಗ್ಗೆ ಸಾರ್ವಜನಿಕರು ನಮ್ಮ ಗಮನಕ್ಕೆ ತಂದರೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ನಗರದಲ್ಲಿ ಎಲ್ಲೆಂದರಲ್ಲಿ ಆಟೋಗಳನ್ನು ನಿಲ್ಲಿಸಬಾರದು, ಏಕಮುಖ ರಸ್ತೆಗಳಲ್ಲಿ ನಿಯಮ ಉಲ್ಲಂಘಿಸಬಾರದು, ಸಾರ್ವಜನಿಕರಿಗೆ ಅನುಕೂಲವಾಗುವಂತೆ ಆಟೋ ಚಾಲಕರು ಸ್ಪಂದಿಸಬೇಕು. ಸಂಚಾರಕ್ಕೆ ಆಡಚಣೆಯುಂಟಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು. ಈ ನಿಟ್ಟಿನಲ್ಲಿ ಪೋಲೀಸರು ಮತ್ತು ಅಧಿಕಾರಿಗಳು ಗಮನಿಸಬೇಕು, ನಗರದಿಂದ ತಾಯಿ ಮಗು ಆಸ್ಪತ್ರೆಗೆ ಒಂದಿಷ್ಟು ಪಿಂಕ್ ಆಟೋ ರಿಕ್ಷಾಗಳನ್ನು ಹಾಕಿದರೆ ಅನುಕೂಲ, ನಿರುದ್ಯೋಗಿ ಮಹಿಳೆಯಗೂ ಕೆಲಸ ಸಿಕ್ಕಂತಾಗುತ್ತದೆ, ರೋಗಿಗಳ ಸುಲಿಗೆಯೂ ತಪ್ಪುತ್ತದೆ.
Comments