ರಾಹುಲ್ ಗಾಂಧಿ ಹೇಳಿಕೆಗೆ ತಿರುಗೇಟು ಕೊಟ್ಟ ದೊಡ್ಡ ಗೌಡ್ರು..!!

03 May 2018 6:16 PM |
4337 Report

ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜಕೀಯದ ಕಾವು ಹೆಚ್ಚುತ್ತಿದೆ. ನಾವು ಯಾವುದಕ್ಕಾದರೂ ಬೆಂಬಲ ಘೋಷಿಸುತ್ತೇವೆ ಅವರಿಗೇನು? ಎಂದು ಪ್ರಶ್ನಿಸಿ ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡ ರಾಹುಲ್ ಗಾಂಧಿಗೆ ತಿರುಗೇಟು ನೀಡಿದ್ದಾರೆ.

ದೇವೇಗೌಡರು ಯಾವುದಕ್ಕೆ ಬೆಂಬಲ ನೀಡುತ್ತಾರೆಂದು ಸ್ಪಷ್ಟಪಡಿಸಬೇಕೆಂಬ ರಾಹುಲ್ ಗಾಂಧಿ ಹೇಳಿಕೆ ವಿಚಾರವಾಗಿ ಮಾತನಾಡಿದ ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡ  ಅವರು, ರಾಹುಲ್ ಗಾಂಧಿ ತೀರ್ಮಾನ ಮಾಡಲಿ. ನನ್ನ ನಿಲುವು ಬಗ್ಗೆ ರಾಹುಲ್​ಗೆ ಏಕೆ ಚಿಂತೆ? ಅವರ ಪ್ರಶ್ನೆಯಲ್ಲಿಯೇ ಉತ್ತರವಿದೆ ಎಂದು ಹೇಳಿದರು. 120 ಸ್ಥಾನ ಬರುತ್ತದೆಯೋ ಇಲ್ಲವೋ ಎಂದು ಅವರು ತಿಳಿದುಕೊಳ್ಳಬೇಕು. 120 ಸ್ಥಾನ ಕಾಂಗ್ರೆಸ್ ಬರುತ್ತೆ ಎಂಬುದು ಅವರ ಕನಸು. ಎಷ್ಟು ಸ್ಥಾನ ಬರುತ್ತೆ ಎಂದು ರಾಹುಲ್ ಗಾಂಧಿ ಸಿದ್ದರಾಮಯ್ಯರನ್ನೇ ಕೇಳಲಿ. ಸಿದ್ದರಾಮಯ್ಯ ನನ್ನ ಜೊತೆ ಬೆಳೆದ ಮನುಷ್ಯ ನನ್ನ ಬಗ್ಗೆಯೇ ಏಕವಚನದಲ್ಲಿ ಮಾತನಾಡುತ್ತಾರೆ ಎಂದು ತಮ್ಮ ಹಳೆಯ ಶಿಷ್ಯನ ಬಗ್ಗೆ ಕಿಡಿಕಾರಿದರು.

ತಮಿಳುನಾಡಿಗೆ ನಾಲ್ಕು ಟಿಎಂಸಿ ಕಾವೇರಿ ನೀರು ಬಿಡಬೇಕೆಂಬ ಸುಪ್ರೀಂಕೋರ್ಟ್ ಆದೇಶ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ನಮಗೆ ನೀರಿಲ್ಲದೇ ಪರದಾಡುವಂತಹ ಪರಿಸ್ಥಿತಿ ಇದೆ. ಎರಡು ತಿಂಗಳ ಹಿಂದೆ ಆರು ವಾರಗಳ ಗಡುವು ನೀಡಿತ್ತು. ಜೂನ್ ಮೊದಲ ವಾರದವರೆಗೆ ಮೊದಲು ಕುಡಿಯುವ ನೀರು ಉಳಿಸಿಕೊಳ್ಳಬೇಕು. ನಮಗೆ ಕುಡಿಯಲು ನೀರಿಲ್ಲ. ಇನ್ನೂ ಅಂತಿಮ ತೀರ್ಪು ಬಂದಿಲ್ಲ. ಅಂತಿಮ ತೀರ್ಪಿನ ಬಗ್ಗೆ ಸಮಯ ನಿಗದಿ ಮಾಡಿಲ್ಲ. ರಾಜ್ಯ ಸರ್ಕಾರ ನೀರನ್ನು ಉಳಿಸಿಕೊಳ್ಳಬೇಕು. ಜೂನ್ ಮೊದಲ ವಾರದಲ್ಲಿ ನಮಗೆ ಮಳೆ ಬರುತ್ತದೆ. ಜಲಾಶಯಗಳ ನೀರಿನ ಸ್ಥಿತಿ ಅರಿತುಕೊಳ್ಳಬೇಕು. ಆದೇಶದ ವರದಿ ತರಿಸಿಕೊಂಡ ಬಳಿಕ ಪ್ರತಿಕ್ರಿಯಿಸುತ್ತೇನೆ ಎಂದು ಹೇಳಿದ್ದಾರೆ.

Edited By

Shruthi G

Reported By

hdk fans

Comments