ವಿಧಾನಸಭಾ ಚುನಾವಣೆ ಬಗ್ಗೆ ಭವಿಷ್ಯ ನುಡಿದ ಜೆಡಿಎಸ್ ನಾಯಕ ಮಧುಬಂಗಾರಪ್ಪ

ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜಕೀಯ ರಂಗೇರುತ್ತಿದೆ. ರಾಜ್ಯದೆಲ್ಲೆಡೆ ಜೆಡಿಎಸ್ ಪರವಾಗಿ ಒಳ್ಳೆಯ ವಾತಾವರಣ ಕಂಡು ಬಂದಿದೆ. ಪಕ್ಷ ಅಧಿಕಾರಕ್ಕೆ ಬಂದೇ ಬರುತ್ತದೆ ಎಂಬ ವಿಶ್ವಾಸವಿದೆ ಎಂದು ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ಹಾಗೂ ಶಾಸಕ ಮಧುಬಂಗಾರಪ್ಪ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿ ಮತದಾರರು ಪ್ರಾದೇಶಿಕ ಪಕ್ಷ ಜೆಡಿಎಸ್ ಗೆ ಅವಕಾಶ ನೀಡುತ್ತಾರೆ. ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಸೊರಬ ಕ್ಷೇತ್ರದಲ್ಲೂ ಜೆಡಿಎಸ್ ಪರ ಬೆಂಬಲ ವ್ಯಕ್ತವಾಗಿದೆ. ಕಳೆದ 5 ವರ್ಷಗಳಿಂದ ಶಾಸಕರಾಗಿ ತಾವು ಕ್ಷೇತ್ರದ ಅಭಿವೃದ್ದಿಗೆ ಸಾಕಷ್ಟು ಕೊಡುಗೆ ನೀಡಿದ್ದೇನೆ. 15ನೇ ತಾರೀಖಿನಂದು ತಮ್ಮ ಪರವಾಗಿ ಫಲಿತಾಂಶ ಹೊರಬರುವ ನಿರೀಕ್ಷೆ ಇದೆ ಎಂದರು.
ಬಿಜೆಪಿ ಜೊತೆ ಕೈಜೋಡಿಸಿದರೆ ಹೆಚ್.ಡಿ. ಕುಮಾರಸ್ವಾಮಿಯವರನ್ನು ಕುಟುಂಬದಿಂದ ಬಹಿಷ್ಕಾರ ಹಾಕುತ್ತೇನೆ ಎಂದು ಜೆಡಿಎಸ್ ವರಿಷ್ಟ ಎಚ್.ಡಿ.ದೇವೇಗೌಡ ಅವರೇ ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಅಗತ್ಯತೆ ಜೆಡಿಎಸ್ ಗೆ ಇಲ್ಲ. ಇದು ಕಾಂಗ್ರೆಸ್ ಮಾಡುತ್ತಿರುವ ಅಪಪ್ರಚಾರವಷ್ಟೆ ಎಂದು ಹೇಳಿದರು. ತಮ್ಮ ವಿರುದ್ದ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳೆಲ್ಲರೂ ಪ್ರತಿಸ್ಪರ್ಧಿಗಳೇ ಆಗಿದ್ದಾರೆ. ಕೆಲವರು ತಮಗೆ ರಾಜಕೀಯದಲ್ಲಿ ಉಳಿಗಾಲವಿಲ್ಲ ಎಂದು ಬೇರೆ ಪಕ್ಷಗಳನ್ನರಸಿ ಹೋಗಿದ್ಧಾರೆ. ಅವರು ಹೋದ ಕಡೆ ಆ ಪಕ್ಷದಲ್ಲಿ ಗೊಂದಲ ಹೆಚ್ಚಾಗಿದೆ ಹೊರತು ಆ ಪಕ್ಷಗಳಿಗೇನು ಅನುಕೂಲವಾಗಿಲ್ಲ ಎಂದರು.
Comments