ಜೆಡಿಎಸ್ ಪರ ಬಿಸಿಲಿನಲ್ಲೂ ಬಿರುಸಿನ ಪ್ರಚಾರ ಮಾಡಿದ ಮಳೆ ಹುಡುಗಿ
ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿ ಜೆಡಿಎಸ್ ಅಭ್ಯರ್ಥಿ ಆನಂದ್ ಅಸ್ನೋಟಿಕರ್ ಪರ ಮಳೆ ಹುಡುಗಿ ಪೂಜಾ ಗಾಂಧಿ ನಗರದಲ್ಲಿ ಮತಯಾಚನೆ ಮಾಡಿದರು. ನಗರದ ಅಂಬೇಡ್ಕರ್ ವ್ರತ್ತಕ್ಕೆ ಆಗಮಿಸಿದ ಪೂಜಾ ಗಾಂಧಿ ಅಂಬೇಡ್ಕರ್ ವ್ರತ್ತಕ್ಕೆ ಮಾಲಾರ್ಪಣೆ ಮಾಡಿ ಬಳಿಕ ಜೆಡಿಎಸ್ ಅಭ್ಯರ್ಥಿ ಆನಂದ ಅಸ್ನೋಟಿಕರ್ ಪರ ಪ್ರಚಾರ ಭಾಷಣ ಮಾಡಿದರು.
ಕುಮಾರಸ್ವಾಮಿ ಅವರು ಜನರ ಜೊತೆ ಬೆರೆಯುವವರು. ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದಾಗ ಅನೇಕ ಜನಪರ ಯೋಜನೆ ಜಾರಿಗೆ ತಂದಿದ್ದರು. ಎಚ್’ಡಿಕೆ ಹೆಚ್ಚು ದಿನ ಅಧಿಕಾರ ನಡೆಸಲು ಅವಕಾಶ ಸಿಕ್ಕಿಲ್ಲ. ಹಾಗಾಗಿ ಮತ್ತೊಮ್ಮೆ ಕುಮಾರಸ್ವಾಮಿಗೆ ಅಧಿಕಾರ ನೀಡಿ ಎಂದು ಪೂಜಾ ಮನವಿ ಮಾಡಿದರು. ನಂತರ ಅಭಿಮಾನಿಗಳ ಒತ್ತಾಯದ ಮೇರೆಗೆ ಮುಂಗಾರು ಮಳೆಯ ಚಿತ್ರದ 'ಕುಣಿದು ಕುಣಿದು ಬಾರೆ' ಹಾಡಿನ ಎರಡು ಸಾಲುಗಳನ್ನು ಪೂಜಾ ಹಾಡಿದರು. ಆಗ ನೆರೆದಿದ್ದ ಮಹಿಳೆಯರು, ಯುವತಿಯರು ಪೂಜಾ ಹಾಡಿಗೆ ಚಪ್ಪಾಳೆ ತಟ್ಟಿ ಸಂಭ್ರಮಿಸಿದರು. ನಗರದ ಗ್ರೀನ್ ಸ್ಟ್ರೀಟ್‍ನಲ್ಲಿ ನಟಿ ಪೂಜಾ ಗಾಂಧಿ ಹಾಗೂ ಆನಂದ ಅಸ್ನೋಟಿಕರ್ ಪಾದಯಾತ್ರೆ ಮಾಡಿ ಮತಯಾಚಿಸಿದರು. ಈ ವೇಳೆ ನಟಿ ಪೂಜಾ ಅವರ ಜೊತೆ ಯುವತಿಯರು ಮತ್ತು ಯುವಕರು ಸೆಲ್ಫಿ ತೆಗೆಸಿಕೊಂಡರು. 10 ರಿಂದ 15 ನಿಮಿಷ ಸೆಲ್ಫಿ ತೆಗೆಸಿಕೊಳ್ಳುವ ಕ್ರಿಯೆ ನಡೆಯಿತು. ಇದೆಲ್ಲಾ ರಸ್ತೆಯಲ್ಲೇ ನಡೆದ ಪರಿಣಾಮ ವಾಹನ ಮತ್ತು ಬಸ್ ಸಂಚಾರಕ್ಕೆ ಅಡ್ಡಿಯಾಯಿತು. ಆಗ ಮಧ್ಯೆ ಪ್ರವೇಶಿಸಿದ ಪೊಲೀಸರು ಕಾರ್ಯಕರ್ತರನ್ನು ಬದಿಗೆ ಸರಿಸಿ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು.
Comments