ಕನ್ನಡಿಗರು ಹೆಮ್ಮೆ ಪಡುವಂತೆ ಮಾಡಿದ ರಾಜ್ ಕುಟುಂಬ
ತಮ್ಮ ತಾತ, ತಂದೆ, ದೊಡ್ಡಪ್ಪ, ಚಿಕ್ಕಪ್ಪ ಎಲ್ಲರೂ ಸಿನಿಮಾರಂಗದಲ್ಲಿ ಕಲಾವಿದರಾಗಿ ಗುರುತಿಸಿಕೊಂಡಿದ್ದರೂ ಡಾ.ರಾಜ್ ಕುಮಾರ್ ಅವರ ಕಿರಿಯ ಮೊಮ್ಮಗ ಯುವ ರಾಜಕುಮಾರ್ ಮಾತ್ರ ಆಯ್ಕೆ ಮಾಡಿಕೊಂಡಿದ್ದು ಶಿಕ್ಷಣ ಕ್ಷೇತ್ರ. ಕನ್ನಡಿಗರು ಐಎಎಸ್ ಪರೀಕ್ಷೆಗಳಿಗೆ ತರಬೇತಿ ಪಡೆಯಲು ದೆಹಲಿಗೆ ಹೋಗಬೇಕಿತ್ತು. ನಮ್ಮದಲ್ಲದ ಊರಿನಲ್ಲಿ ಉಳಿದುಕೊಂಡು ಶಿಕ್ಷಣ ಪಡೆಯುವುದು ತುಂಬಾ ಕಷ್ಟ ಎಂದು ತಿಳಿದ ಡಾ. ರಾಜ್ ಕುಟುಂಬಸ್ಥರು ಬೆಂಗಳೂರಿನಲ್ಲಿ ಅಣ್ಣಾವ್ರ ಹೆಸರಿನಲ್ಲಿ ಡಾ ರಾಜ್ ಕುಮಾರ್ ಸಿವಿಲ್ ಸರ್ವಿಸ್ ಅಕಾಡೆಮಿಯನ್ನು ಆರಂಭ ಮಾಡಿದರು. ಪ್ರಾರಂಭವಾದ ಒಂದೇ ವರ್ಷದಲ್ಲಿ ರಾಜ್ಯದ ಜನರು ಮೆಚ್ಚುವಂತಹ ಕೆಲಸವನ್ನ ಅಣ್ಣಾವ್ರ ಮೊಮ್ಮಗ ಯುವರಾಜ್ ಕುಮಾರ್ ಮಾಡಿದ್ದಾರೆ. ಈ ವರ್ಷ ರಾಜ್ಯದಿಂದ ಐಎಎಸ್ ಗೆ ಆಯ್ಕೆ ಆಗಿರುವ 28 ಜನರ ಪೈಕಿ 16 ಜನರು ಡಾ ರಾಜ್ ಕುಮಾರ್ ಸಿವಿಲ್ ಸರ್ವಿಸ್ ಅಕಾಡೆಮಿಯಲ್ಲಿ ಸಂದರ್ಶನಕ್ಕಾಗಿ ತರಬೇತಿ ಪಡೆದಿದ್ದರು ಎನ್ನುವುದು ಖುಷಿಯ ವಿಚಾರವಾಗಿದೆ.
ಐಎಎಸ್ ನ ಅಂತಿಮ ಪರೀಕ್ಷೆಯಲ್ಲಿ ಆಯ್ಕೆಯಾದ ಬಳಿಕ ನಡೆಯುವ ಸಂದರ್ಶನಕ್ಕೆ ಸಿದ್ಧಗೊಳ್ಳಲು ರಾಜಕುಮಾರ್ ಅಕಾಡೆಮಿಯಲ್ಲಿ ಅಣಕು ಸಂದರ್ಶನ ನಡೆಸಲಾಗಿದೆ. ಅಣಕು ಸಂದರ್ಶನದಲ್ಲಿ ಯುಪಿಎಸ್ ಸಿಗೆ ಸಂದರ್ಶನದ ಸವಾಲುಗಳನ್ನು ಎದುರಿಸಲು ತರಬೇತಿ ನೀಡಲಾಗುತ್ತದೆ. ಇಷ್ಟು ವರ್ಷಗಳ ಕಾಲ ಸಿನಿಮಾರಂಗದಲ್ಲಿ ಯಶಸ್ಸು ಕೀರ್ತಿಗಳಿಸಿದ ಡಾ ರಾಜ್ ಕುಟುಂಬಸ್ಥರು ಈಗ ಶಿಕ್ಷಣ ಕ್ಷೇತ್ರದಲ್ಲಿಯೂ ಹೆಸರು ಮಾಡುತ್ತಿರುವುದು ಕನ್ನಡಿಗರು ಹೆಮ್ಮೆ ಪಡುವಂತಾಗಿದೆ.
Comments