ಪ್ರಚಾರದ ಮೇಲೆ ನಿಗಾ ವಹಿಸಲು ಜೆಡಿಎಸ್‌ನಿಂದ ಹೊಸತಂತ್ರ
ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜಕೀಯ ರಂಗೇರುತ್ತಿದೆ. ಎರಡು ರಾಷ್ಟ್ರೀಯ ಪಕ್ಷಗಳಿಗಿಂತ ಜೆಡಿಎಸ್ ರಾಜ್ಯದೆಲ್ಲೆಡೆ ಅಬ್ಬರದ ಪ್ರಚಾರ ಕಾರ್ಯದಲ್ಲಿ ನಿರತವಾಗಿದೆ.
ಬಿಜೆಪಿ ಹಾಗೂ ಕಾಂಗ್ರೆಸ್‍ನಲ್ಲಿ ಟಿಕೆಟ್ ಕೈತಪ್ಪಿದ ಪ್ರಭಾವಿ ನಾಯಕರನ್ನು ತನ್ನತ್ತ ಸೆಳೆದು ಪ್ರಬಲವಾಗಿರುವ ಜೆಡಿಎಸ್ ಯಾವುದೇ ರೀತಿಯ ಅಚ್ಚರಿಯ ಫಲಿತಾಂಶಕ್ಕೂ ಕಾರಣವಾಗುವ ಸಾಧ್ಯತೆಯನ್ನು ತೋರಿಸುತ್ತಿದೆ. ರಾಜ್ಯದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಹೆಚ್ಚಿದೆ ಎಂಬ ಮಾತು ಕೇಳಿಬರುತ್ತಿರುವ ಸಂದರ್ಭದಲ್ಲಿ ಹೆಚ್ಚಿನ ಸ್ಥಾನ ಪಡೆದು, ಸರ್ಕಾರ ರಚನೆಯಲ್ಲಿ ಮಹತ್ವದ ಪಾತ್ರ ವಹಿಸುವ ನಿಟ್ಟಿನಲ್ಲಿ ಜೆಡಿಎಸ್ ಇದೀಗ ಇನ್ನಷ್ಟು ಬಲ ಹೆಚ್ಚಿಸಿಕೊಂಡಿದೆ.
ರಾಷ್ಟ್ರೀಯ ಪಕ್ಷಗಳಿಗೆ ಹೋಲಿಸಿದರೆ ಬೃಹತ್ ಕಾರ್ಯಕರ್ತರ ಬಲ ಹೊಂದಿರದ ಜೆಡಿಎಸ್ ತನ್ನ ಪಕ್ಷದ ನೇತಾರರಿಗೆ ನೀಡಿರುವ ವಾಹನಗಳು ಜಿಪಿಎಸ್ ತಂತ್ರಜ್ಞಾನ ಅಳವಡಿಸುವ ಮೂಲಕ ನಿಗಾ ವಹಿಸಲು ಮುಂದಾಗಿದೆ. ಹಾಗಾಗಿ ಯಾವ ವಾಹನ ಎಲ್ಲಿದೆ? ಎಷ್ಟು ಕಿ.ಮೀ. ಕ್ರಮಿಸಿದೆ ಎಂಬುದನ್ನು ನಿಖರವಾಗಿ ತಿಳಿಯಬಹುದು. ಜೆಡಿಎಸ್‌ನ ಕೆಲವು ಅಭ್ಯರ್ಥಿಗಳು ಕೂಡ ಜಿಪಿಎಸ್ ಆಧಾರಿತ ವಾಹನಗಳನ್ನು ಪ್ರಚಾರ ಕಾರ್ಯಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಅನೇಕ ಕಾರ್ಯಕರ್ತರು ಅಭ್ಯರ್ಥಿಗಳಿಂದ ಹಣ-ವಾಹನ ಪಡೆದು ಪ್ರಚಾರಕ್ಕೆ ಹೋಗದೆ ಇರುತ್ತಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ಅಂಥಹವರ ಮೇಲೆ ನಿಗಾ ಇಡಲು ಅಭ್ಯರ್ಥಿಗಳು ಜಿಪಿಎಸ್ ಆಧಾರಿತ ವಾಹನಗಳ ಮೊರೆ ಹೋಗಿದ್ದಾರೆ.
ಬಾಡಿಗೆಗೆ ಪಡೆದ ವಾಹನಗಳಿಗೆ ಬಿಲ್ ಪಾವತಿ, ಪಕ್ಷದ ಸ್ಟಾರ್ ಪ್ರಚಾರಕರ ಕಾರ್ಯವೈಖರಿ ಗಮನಿಸುವುದು ಜಿಪಿಎಸ್ ಅಳವಡಿಕೆಯಿಂದ ಸುಲಭ. ಪಕ್ಷದ ವಾಹನ ಪಡೆದ ಪ್ರಚಾರಕರು, ಮುಖಂಡರು ಪ್ರಚಾರದಲ್ಲಿ ಯಾವ ರೀತಿ ಸಕ್ರಿಯರಾಗಿದ್ದಾರೆ ಎಂಬುದನ್ನು ಈ ತಂತ್ರಜ್ಞಾನದ ಮೂಲಕ ವಾರ್ ರೂಂನಲ್ಲೇ ವೀಕ್ಷಿಸಬಹುದು ಎಂದು ಜೆಡಿಎಸ್ ಐಟಿ ಸೆಲ್ ವಿಭಾಗದ ಮಧುಕುಮಾರ್ ಅಭಿಪ್ರಾಯಪಟ್ಟಿದ್ದಾರೆ. ಜೆಡಿಎಸ್ ನಾಯಕರಿಗೆ ನೀಡಿರುವ 126 ವಾಹನಗಳು ಜಿಪಿಎಸ್ ಹೊಂದಿವೆ. ಇದರಿಂದ ಯಾವ ವಾಹನ ಎಲ್ಲಿದೆ? ಎಂಬುದನ್ನು ಟ್ರ್ಯಾಕ್ ಮಾಡಲು, ಎಷ್ಟು ಕ್ರಮಿಸಿದೆ ಎಂಬುದನ್ನು ತಿಳಿಯಲು ಹೆಚ್ಚು ಸಹಾಯಕವಾಗುತ್ತದೆ ಎಂದಿದ್ದಾರೆ.
Comments