'ಕೈ' ಪಕ್ಷದ ರಾಜಕೀಯದ ಬಗ್ಗೆ ಭವಿಷ್ಯ ನುಡಿದ ಎಚ್ ಡಿಕೆ
ಕಾಂಗ್ರೆಸ್ ಪಕ್ಷ ಈ ಬಾರಿ 130ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಹೇಳುತ್ತಿರುವ ಸಿಎಂ ಸಿದ್ದರಾಮಯ್ಯಗೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ತಿರುಗೇಟು ಕೊಟ್ಟಿದ್ದಾರೆ.
ರಾಜ್ಯಾದ್ಯಂತ ಸುತ್ತಾಡಿ ತಾನು ಜನರ ಅಭಿಪ್ರಾಯ ಕೇಳುತ್ತಿದ್ಧೇನೆ. ಅದರಂತೆ, ಈ ಬಾರಿಯ ಚುನಾವಣೆಯಲ್ಲಿ ಜಾತ್ಯತೀತ ಜನತಾ ದಳವೇ ಬಹುಮತ ಪಡೆಯುತ್ತದೆ. ಕಾಂಗ್ರೆಸ್ ಪಕ್ಷ ಮೂರನೇ ಸ್ಥಾನಕ್ಕೆ ಕುಸಿಯುತ್ತದೆ ಎಂದು ಕುಮಾರಸ್ವಾಮಿ ಭವಿಷ್ಯ ನುಡಿದಿದ್ದಾರೆ. ಸಿದ್ದರಾಮಯ್ಯಗೆ ಕಾಂಗ್ರೆಸ್ 25 ಸ್ಥಾನಕ್ಕೆ ಇಳಿಯುತ್ತೆಂದು ರಾತ್ರಿಯ ಕನಸಿನಲ್ಲಿ ಬರುತ್ತದೆ. ಬೆಳಗ್ಗೆ ಎದ್ದು, ಅದನ್ನು ಜೆಡಿಎಸ್ ತಲೆ ಮೇಲೆ ಹಾಕುತ್ತಾರೆ. ಅದು ಅವರ ಉದಾಸೀನ ಅಲ್ಲ. ಅವರಿಗೆ ಜೆಡಿಎಸ್ ಕಂಡರೆ ಭಯ ಇದೆ. ಅದಕ್ಕೆ ಯಾವಾಗಲೂ ಅವರು ಜೆಡಿಎಸ್ಗೆ 25 ಸ್ಥಾನ ಬರುತ್ತದೆ ಎಂದು ಹೇಳುತ್ತಲೇ ಇರುತ್ತಾರೆ ಎಂದು ಕುಮಾರಸ್ವಾಮಿ ವ್ಯಂಗ್ಯ ಮಾಡಿದ್ದಾರೆ. ಪತ್ರಕರ್ತರ ಸಂಘದಿಂದ ಆಯೋಜಿಸಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಎಚ್.ಡಿ.ಕುಮಾರಸ್ವಾಮಿ ಅವರು, ಸಿದ್ದರಾಮಯ್ಯನವರದ್ದು ನುಡಿದಂತೆ ಲೂಟಿ ಹೊಡೆವ ಸರಕಾರ ಎಂದು ಲೇವಡಿ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷ ಯಾವಾಗಲೂ ತಾನು ನುಡಿದಂತೆ ನಡೆದ ಸರಕಾರ ಎಂದು ಹೇಳಿಕೊಳ್ಳುತ್ತದೆ. ಆದರೆ, ಅದು ನುಡಿದಂತೆ ಹೊಡೆದ ಸರಕಾರವಾಗಿದೆ. ಎಷ್ಟು ಲೂಟಿ ಮಾಡಬೇಕೆಂದಿದ್ದರೋ ಅಷ್ಟನ್ನೂ ಹೊಡೆದಿದ್ದಾರೆ ಎಂದು ಎಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ. ಸರಕಾರದ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ ಎಚ್.ಡಿ.ಕೆ, ಕಾಂಗ್ರೆಸ್ ಪಕ್ಷದವರು ಚುನಾವಣೆಗಾಗಿ ಗುತ್ತಿಗೆದಾರರಿಂದ ಹಣ ಪಡೆದಿದ್ದಾರೆ. ಇವರು ಸೋತರೆ ಆ ಕಾಂಟ್ರ್ಯಾಕ್ಟರ್ಗಳ ಗತಿ ಏನು? ಎಂದು ವ್ಯಂಗ್ಯ ಮಾಡಿದ್ದಾರೆ.ತಮ್ಮ ಪಕ್ಷ ಸ್ವತಂತ್ರವಾಗಿ ಅಧಿಕಾರಕ್ಕೆ ಬಂದರೆ ದಲಿತ ಮತ್ತು ಮುಸ್ಲಿಂ ಸಮುದಾಯಕ್ಕೆ ಸೇರಿದವರಿಗೆ ಉಪಮುಖ್ಯಮಂತ್ರಿ ಪಟ್ಟ ಕೊಡುವುದಾಗಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
Comments