ಜಮೀರ್ ಅಹ್ಮದ್ ಹೇಳಿಕೆಗೆ ತಿರುಗೇಟು ಕೊಟ್ಟ ಎಚ್ ಡಿಕೆ
ಸುದ್ದಿಗಾರರೊಂದಿಗೆ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು, ಪ್ಯಾಂಟ್ ನೊಳಗೆ ಇರುವುದು ಖಾಕಿ ಚಡ್ಡಿ (ಬಿಜೆಪಿ ಹಾಗೂ ಆರೆಸ್ಸೆಸ್ ಬಗೆಗಿನ ಒಲವು) ಎಂಬ ಜಮೀರ್ ಅಹ್ಮದ್ ಅವರು ಮಾಡಿದ ವ್ಯಂಗ್ಯದ ವಿಚಾರವಾಗಿ ಈ ರೀತಿ ತಿರುಗೇಟು ನೀಡಿದ್ದಾರೆ. ಜಮೀರ್ ಒಬ್ಬ ಅನಾಗರಿಕ. ಅವರ ವಿಚಾರಕ್ಕೆಲ್ಲ ನಾನು ಉತ್ತರ ಕೊಡಲ್ಲ. ಕೆಸರಿಗೆ ಕಲ್ಲು ಹಾಕಿ ಮುಖಕ್ಕೆ ಸಿಡಿಸಿಕೊಳ್ಳಲ್ಲ ಎಂದರು.
"ಅಂಬರೀಶ್ ಅವರು ಯಾವುದೇ ಪಕ್ಷದಲ್ಲಿದ್ದರೂ ದೇವೇಗೌಡರ ವಿಚಾರವಾಗಿ, ಅವರ ಹೋರಾಟದ ಬಗ್ಗೆ ಬಿಚ್ಚು ಮನಸ್ಸಿನಿಂದಲೇ ಮಾತನಾಡಿದ್ದಾರೆ. ಅದು ಹಲವಾರು ವರ್ಷದಿಂದ ಗಮನಿಸಬಹುದು. ತುಂಬು ಹೃದಯದಿಂದ ಚರ್ಚೆ ಮಾಡುವುದರಲ್ಲಿ ಅಂಬರೀಶ್ ಮೊದಲನೇ ವ್ಯಕ್ತಿ" ಎಂದಿದ್ದಾರೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ. ಅಂಬರೀಶ್ ನಮ್ಮ ಹಿರಿಯ ಸಹೋದರ. ಅವರು ಯಾವುದೇ ಪಕ್ಷದಲ್ಲಿದ್ದರೂ ಅಜಾತಶತ್ರು. ಎಲ್ಲರ ಜತೆಗೂ ಅಂಬರೀಶ್ ಉತ್ತಮ ಸಂಬಂಧ ಹೊಂದಿದ್ದಾರೆ. ಅವರು ನಮ್ಮನ್ನು ಬೆಂಬಲಿಸುವ ನಿರ್ಧಾರ ಮಾಡಿದರೆ ಸ್ವಾಗತಿಸುತ್ತೇನೆ. ಆದರೆ ನಾನು ಒತ್ತಾಯ ಮಾಡುವುದಿಲ್ಲ ಎಂದು ಅವರು ಹೇಳಿದರು. ಸಮಾಜದ ಎಲ್ಲಾ ವಿಚಾರಗಳನ್ನು ಅವರು ಗಮನಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ರಾಜ್ಯದ ಒಳಿತಿನ ದೃಷ್ಟಿಯಿಂದ ಅವರು ಸೂಕ್ತ ನಿರ್ಧಾರ ಮಾಡಬಹುದು ಎಂದು ಅಭಿಪ್ರಾಯಪಟ್ಟರು.
Comments