'ಕೈ' ಬಿಟ್ಟ ಪ್ರಭಾವಿ ಮಾಜಿ ಶಾಸಕನಿಗೆ ಅಧಿಕೃತ ಹೊರೆ ಹೊರಿಸಿದ ಎಚ್ ಡಿಕೆ
ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜ್ಯ ರಾಜಕೀಯ ರಂಗೇರುತ್ತಿದೆ. ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಟಿಕೆಟ್ ವಂಚಿತ ಮಾಜಿ ಶಾಸಕ ಹೆಚ್ ನಿಂಗಪ್ಪ ಅಧಿಕೃತವಾಗಿ ಎಚ್.ಡಿ.ಕುಮಾರಸ್ವಾಮಿ ಸಮ್ಮುಖದಲ್ಲಿ ಜೆಡಿಎಸ್ ಸೇರ್ಪಡೆಯಾದರು.
ತುಮಕೂರಿನ ಸಿದ್ದಗಂಗಾ ಬಡಾವಣೆಯ ಮಾಜಿ ಶಾಸಕ ಹೆಚ್ .ನಿಂಗಪ್ಪರವರ ಮನೆಗೆ ಎಚ್.ಡಿ.ಕುಮಾರಸ್ವಾಮಿ ಆಗಮಿಸಿ ಜೆಡಿಎಸ್ ಪಕ್ಷಕ್ಕೆ ಸೇರುವ ಸಂಬಂಧಿಸಿದಂತೆ ಒಂದುವರೆ ತಾಸುಗಳ ಕಾಲ ನಡೆದ ಸುದೀರ್ಘ ಮಾತುಕತೆಯ ಬಳಿಕ ಸ್ಥಳ ಸ್ಥಳಕ್ಕಾಗಮಿಸಿದ ಗ್ರಾಮಾಂತರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಡಿಸಿ ಗೌರಿಶಂಕರ್ ಹಣ್ಣಿನ ಬುಟ್ಟಿ, ಶಾಲು ಪೇಟ ದೊಂದಿಗೆ ನಿಂಗಪ್ಪನವರ ಮನೆ ಪ್ರವೇಶಿಸಿದರು. ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಮಾತನಾಡಿ, ನನಗಿಂತ ಪಕ್ಷದಲ್ಲಿ ಹಿರಿಯರಾದ ನಿಂಗಪ್ಪರವರು ಮರಳಿ ಮನೆಗೆ ಆಗಮಿಸಿದ್ದಾರೆ. ಯಾವುದೇ ಷರತ್ತುಗಳನ್ನು ವಿಧಿಸದೆ ಪಕ್ಷಕ್ಕೆ ಮರಳಿರುವ ನಿಂಗಪ್ಪ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾಗುತ್ತಿದ್ದಾರೆ ಎಂದರು. ಗ್ರಾಮಾಂತರ ಕ್ಷೇತ್ರದಲ್ಲಿ ಸುಮಾರು ಐವತ್ತು ಸಾವಿರ ಕಾರ್ಯಕರ್ತರ ಎದುರು ರಾಷ್ಟ್ರಾಧ್ಯಕ್ಷ ರಾದ ಜೆಡಿಎಸ್ ಎಚ್.ಡಿ.ದೇವೆಗೌಡರ ಸಮ್ಮುಖದಲ್ಲಿ ಜಿಲ್ಲೆಯ ಎಲ್ಲಾ ಶಾಸಕರ ಹಾಗೂ ಮುಖಂಡರ ಸಮ್ಮುಖದಲ್ಲಿ ಬಹಿರಂಗವಾಗಿ ತಮ್ಮ ಅಪಾರ ಬೆಂಬಲಿಗರೊಂದಿಗೆ ಸೇರ್ಪಡೆಯಾಗಿದ್ದಾರೆ. ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಜನತಾದಳದ ಪರವಾಗಿ ಚುನಾವಣಾ ಪ್ರಚಾರದಲ್ಲಿ ತೊಡಗುತ್ತಾರೆ. ತುಮಕೂರು ಗ್ರಾಮಾಂತರ ಕ್ಷೇತ್ರದ ಜೆಡಿಎಸ್‍ನಲ್ಲಿ ನಮ್ಮ ಹಿರಿಯಣ್ಣನಾಗಿ ಜೆಡಿಎಸ್ ಗೆಲುವಿಗೆ ಶ್ರಮಿಸುತ್ತಾರೆ ಎಂದರು.
ಪಕ್ಷಕ್ಕೆ ಮರಳಿ ಬಂದಿರುವ ಹೆಚ್.ನಿಂಗಪ್ಪನವರಿಗೆ ಮುಂದಿನ ದಿನಗಳಲ್ಲಿ ಸರಕಾರದ ಹಂತದಲ್ಲಿ ಸ್ಥಾನಮಾನ ಕಲ್ಪಿಸಲಾಗುವುದು, ಅದು ನನ್ನ ಕರ್ತವ್ಯ ಎಂದು ಎಚ್.ಡಿ.ಕುಮಾರಸ್ವಾಮಿ ನುಡಿದರು. ಮಾಜಿ ಶಾಸಕ ಹೆಚ್ ನಿಂಗಪ್ಪ ಮಾತನಾಡಿ, ನನಗೆ ರಾಜಕೀಯ ಜೀವನ ನೀಡಿದ ಜೆಡಿಎಸ್ ಪಕ್ಷ , ಹಾಗಾಗಿ ಮತ್ತೆ ಮರಳಿದ್ದೇನೆ. ಬೇಸರಗೊಂಡು ಪಕ್ಷ ತೊರೆದು ಅನ್ಯ ಪಕ್ಷಗಳಲ್ಲಿದ್ದರೂ ಆಂತರಿಕವಾಗಿ ನನ್ನ ಮನಸ್ಸು ಜೆಡಿಎಸ್ ನೊಂದಿಗಿತ್ತು. ಹಾಗಾಗಿ ನಾನು ಯಾವುದೇ ಪಕ್ಷದಲ್ಲಿದ್ದರೂ ಹಳೆಯ ಸ್ನೇಹಿತರೊಂದಿಗಿನ ಸಂಬಂಧವನ್ನು ಕಳೆದು ಕೊಂಡಿರಲಿಲ್ಲ. ನಾನು ಯಾರನ್ನು ದೂರ ಮಾಡಿಕೊಂಡಿರಲಿಲ್ಲ. ನನ್ನ ಎಲ್ಲಾ ಶಾಸಕ ಮಿತ್ರರು ಮತ್ತೆ ವಾಪಸ್ಸ್ ಬರುವಂತೆ ಒತ್ತಾಯ ಮಾಡಿದ ಹಿನ್ನೆಲೆಯಲ್ಲಿ ಪುನಃ ಪಕ್ಷಕ್ಕೆ ಬಂದಿದ್ದೇನೆ. ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡುವ ಉದ್ದೇಶದಿಂದ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷವನ್ನು ಸಂಘಟಿಸಲು ಶ್ರಮಿಸುತ್ತೇನೆ ಎಂದರು. ಪಕ್ಷಕ್ಕೆ ಮರಳಿರುವ ಹೆಚ್ ನಿಂಗಪ್ಪನವರಿಗೆ ಜೆಡಿಎಸ್ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಹುದ್ದೆ ಹಾಗೂ ಜಿಲ್ಲೆಯ ಚುನಾವಣಾ ಉಸ್ತುವಾರಿ ಯ ಹೊಣೆ ಹೊರಿಸುವ ಸಾದ್ಯತೆಗಳಿವೆ.
Comments