ರಾಷ್ಟ್ರೀಯ ಪಕ್ಷಗಳಾದ 'ಕೈ-ಕಮಲ'ಕ್ಕೆ ಟಾಂಗ್ ಕೊಟ್ಟ ಎಚ್ ಡಿಕೆ
ರಾಜ್ಯದ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದ ಸರ್ಕಾರವಲ್ಲ ಬದಲಿಗೆ ನುಡಿದಂತೆ ಹೊಡೆದ ಸರ್ಕಾರ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಸಂಘದಲ್ಲಿ ನಡೆದ ಪತ್ರಿಕಾ ಸಂವಾದದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಎಲ್ಲೆಡೆ ನುಡಿದಂತೆ ನಡೆದ ಸರ್ಕಾರವೆಂದು ಘೋಷಿಸಿಕೊಳ್ಳುತ್ತಿದೆ. ಆದರೆ ಆ ಸರ್ಕಾರ ನುಡಿದಂತೆ ಹೊಡೆದ ಸರ್ಕಾರ ಎಂದು ಕಿಡಿಕಾರಿದರು.
ಇದುವರೆಗೂ ಎಲ್ಲಾ ಆಶ್ವಾಸನೆಗಳನ್ನು ಈಡೇರಿಸುವುದಾಗಿ ಹೇಳಿಕೊಳ್ಳುತ್ತಿದ್ದಾನೆ. ಯಾವಾಗ ಆಶ್ವಾಸನೆಗಳನ್ನು ಈಡೇರಿಸಿದ್ದಾರೆ ಎಂಬುದೇ ತಿಳಿಯುತ್ತಿಲ್ಲ. ಅದು ಹೇಗೆ ಅವರು ಅದನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ ಎಂದು ಪ್ರಶ್ನಿಸಿದರು. ರಾಜ್ಯದ ಜನತೆಯ ತೆರಿಗೆ ಹಣವನ್ನು ರಾಜ್ಯ ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದ ಅವರು, ಯಾವುದೇ ಶಾಶ್ವತವಾದ ಕೆಲಸವನ್ನು ಅವರು ಮಾಡಿಲ್ಲ ಎಂದು ಆರೋಪಿಸಿದರು. ಸಿದ್ದರಾಮಯ್ಯನವರು ಈಗ ಪ್ರಚಾರಕ್ಕೆ ಹೋದ ಸಂದರ್ಭದಲ್ಲಿ ರೈತರಿಗೆ ಬೆಳೆ ಬೆಳೆಯಲು 5000 ರೂ. ನೀಡುವುದಾಗಿ ಹೇಳುತ್ತಿದ್ದಾರೆ. ಆದರೆ ಮುಂದೆ ಇವರೇ ಅಧಿಕಾರಕ್ಕೆ ಬರುತ್ತಾರೆ ಎಂಬುದು ಏನು ಖಚಿತ ಎಂದು ಕೇಳಿದ ಅವರು, ಅಧಿಕಾರದಲ್ಲಿದ್ದ ಅವಧಿಯಲ್ಲೆ ಏನು ಮಾಡದ ಕಾಂಗ್ರೆಸ್ ಮುಂದೆ ಮಾಡುತ್ತದೆ ಎಂಬುದು ಎಷ್ಟು ಸತ್ಯ ಎಂದು ಪ್ರಶ್ನಿಸಿದರು. ನಾನು ಸ್ವಯಂ ಘೋಷಿತ ಮುಖ್ಯಮಂತ್ರಿಯಲ್ಲ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೋದ ಕಡೆಯಲೆಲ್ಲ ನಾನೇ ಮುಂದಿನ ಮುಖ್ಯಮಂತ್ರಿಎಂದು ಹೇಳುತ್ತಿದ್ದಾರೆ. ಅದೇ ರೀತಿ ಬಿ.ಎಸ್.ಯಡಿಯೂರಪ್ಪ ಮುಂದಿನ 24 ದಿನಗಳ ನಂತರ ನಾನೇ ಸಿಎಂ ಎಂದು ಹೇಳುತ್ತಿದ್ದಾರೆ. ನಾನು ಮಾತ್ರ ಹಗೆ ಹೇಳತ್ತಿಲ್ಲ. ಈ ಎರಡು ಅವಧಿಯನ್ನು ಕಾಂಗ್ರೆಸ್ ಬಿಜೆಪಿಗೆ ಕೊಟ್ಟಿದ್ದೀರಿ. ಈಗ ನಮಗೊಂದು ಅವಕಾಶ ಕೊಡಿ ನಾನು ಸಿಎಂ ಆಗಿ ಉತ್ತಮ ಕೆಲಸ ಮಾಡಿ ತೋರುವುದಾಗಿ ಬಿಜೆಪಿ ಕಾಂಗ್ರೆಸ್‍ಗೆ ಟಾಂಗ್ ನೀಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆತ್ಮವಾಲೋಕನ ಮಾಡಿಕೊಳ್ಳಬೇಕು. ನಮ್ಮದು ಭ್ರಷ್ಟಾಚಾರ ರಹಿತ ಸರ್ಕಾರ ಎಂದು ಹೇಳಿಕೊಳ್ಳುತ್ತಾರೆ. ಆದರೆ ನಾಲ್ಕು ಜನ ಗುತ್ತಿಗೆದಾರರನ್ನು ಕೇಳಿದರೆ ಬಂಡವಾಳ ಗೊತ್ತಾಗುತ್ತದೆ. ಗುತ್ತಿಗೆದಾರರ ಗುತ್ತಿಗೆ ಪಡೆಯಲು ಹಣ ನೀಡಬೇಕಾದ ಪರಿಸ್ಥಿತಿ ಇದೆ. ಟೆಂಡರ್‍ಗೂ ಹಣ ನೀಡಬೇಕು. ಈ ಹಿನ್ನೆಲೆಯಲ್ಲಿ ಮೋದಿ ಅವರು 10% ಸರ್ಕಾರ ಎಂದು ಟೀಕಿಸಿದ್ದರು ಎಂದು ಹೇಳಿದರು.ಈಗ ಬಿಜೆಪಿ ಕಾಂಗ್ರೆಸ್ ವಿರುದ್ದ ಎಂದು ಹೇಳುವ ನೀವು, ಕೊನೆ ಗಳಿಗೆಯಲ್ಲಿ ಬದಲಾದ ಪರಿಸ್ಥಿತಿಗೆ ಹೊಂದುಕೊಂಡು ಹೋಗುತ್ತೀರ ಎಂಬ ಆರೋಪದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಕುಮಾರಸ್ವಾಮಿ, ನಾನು ಅಡ್ಜೆಸ್ಟ್ ಮೆಂಟ್ ರಾಜಕಾರಣ ಮಾಡುವುದಿಲ್ಲ. ಹಿಂದೆಯೂ ಮಾಡಿಲ್ಲ. ಮುಂದೆಯೂ ಮಾಡುವುದಿಲ್ಲ ಎಂದ ಅವರು, ನಾನೊಂದು ಗುರಿ ಇಟ್ಟುಕೊಂಡಿದ್ದೇನೆ ಅದನ್ನು ತಲುಪುತ್ತೇನೆ ಎಂದು ಸ್ಪಷ್ಟಪಡಿಸಿದರು. ಮೈಸೂರಿನ ವರುಣಾ ಮತ್ತು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಬಿಜೆಪಿಯೊಂದಿಗೆ ಅಭ್ಯರ್ಥಿಗಳ ಹೊಂದಾಣಿಕೆ ಮಾಡಿಕೊಂಡಿದ್ದೀರಿ ಎಂಬ ಮತ್ತೊಂದು ಪ್ರಶ್ನೆಗೆ , ನಾವು ಈ ಕ್ಷೇತ್ರಗಳಿಗೆ ಎರಡು ತಿಂಗಳ ಹಿಂದೆಯೇ ಅಭ್ಯರ್ಥಿಯನ್ನು ಘೋಷಣೆ ಮಾಡಿದ್ದೇವೆ. ಹಾಗಾಗಿ ಹೊಂದಾಣಿಕೆ ಪ್ರಶ್ನೆಯೇ ಇಲ್ಲ ಎಂದು ಉತ್ತರಿಸಿದರು. ರಾಜ್ಯದಲ್ಲಿ ಬಿಜೆಪಿ ನಮಗೆ ಎದುರಾಳಿಯೇ ಅಲ್ಲ. ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಪಕ್ಷಗಳೂ ರಾಜ್ಯಕ್ಕೆ ಶತ್ರು ಪಕ್ಷಗಳಾಗಿವೆ ಎಂದು ದೂರಿದರು.
Comments