ಸಿದ್ದರಾಮಯ್ಯ ನವರ ಎರಡೂ ಕ್ಷೇತ್ರದ ಸ್ಪರ್ಧೆ ಬಗ್ಗೆ ಭವಿಷ್ಯ ನುಡಿದ ಎಚ್ ಡಿಕೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಚಾಮುಂಡೇಶ್ವರಿ ದೇವಿ ಆಶೀರ್ವಾದ ಸಿಗಲ್ಲ ಅನ್ನೋದು ಗೊತ್ತಾಗಿ ಬನಶಂಕರಿ ದೇವಿ ಆಶೀರ್ವಾದಕ್ಕೆ ಇಲ್ಲಿಗೆ ಬರುತ್ತಿದ್ದಾರೆ ಎಂದು ಮಾಜಿ ಸಿಎಂ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಲೇವಡಿ ಮಾಡಿದರು.
ಬಾಗಲಕೋಟೆ ಜಿಲ್ಲೆ ಬಾದಾಮಿ ಕ್ಷೇತ್ರದಲ್ಲಿಂದು ಜೆಡಿಎಸ್ ಅಭ್ಯರ್ಥಿ ಹನಮಂತ ಮಾವಿನಮರದ ಅವರ ನಾಮಪತ್ರ ಸಲ್ಲಿಕೆಯಲ್ಲಿ ಭಾಗವಹಿಸಲು ಬಂದಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರಿಗೆ ಚಾಮುಂಡೇಶ್ವರಿಯಲ್ಲಿ ಗೆಲುವು ದುಸ್ಸಾಹಸ ಅಂತಾ ಗೊತ್ತಾಗಿದ್ದರಿಂದ ಬಾದಾಮಿ ಕಡೆಗೆ ಚಿತ್ತ ಹರಿಸಿದ್ದಾರೆ. ಆದರೆ, ಇಲ್ಲಿಯೂ ಬಾದಾಮಿಯ ಬನಶಂಕರಿ ದೇವಿಯ ಆಶೀರ್ವಾದ ಅವರಿಗೆ ಸಿಗಲ್ಲ. ಹೀಗಾಗಿ ಎರಡು ಕಡೆ ಸ್ಪರ್ಧಿಸಿದರೂ ಅವರಿಗೆ ಸೋಲು ಖಚಿತ ಎಂದು ಭವಿಷ್ಯ ನುಡಿದರು. ಬಿಎಸ್ ವೈ ಮತ್ತು ಸಿದ್ದರಾಮಯ್ಯ ಮುಂದಿನ ಸಿಎಂ ನಾನೇ ಎಂದು ಸ್ವಯಂ ಘೋಷಣೆ ಮಾಡಿಕೊಳ್ಳುತ್ತಿದ್ದಾರೆ. ನಾನು ಸಿಎಂ ಆಗುತ್ತೇನೆ ಎಂದು ಎಲ್ಲೂ ಹೇಳಿಲ್ಲ. ನಿಮ್ಮ ಸಮಸ್ಯೆಗೆ ಸ್ಪಂದಿಸಲು ನನ್ನ ಸಿಎಂ ಮಾಡಿ ಜನರ ಮುಂದೆ ಮನವಿ ಮಾಡಿದ್ದೇನೆ. ಅವಕಾಶ ಕೊಡಿ ಎಂದು ಕೇಳಿಕೊಂಡಿದ್ದೇನೆ ಎಂದರು. ಬಾದಾಮಿಯಲ್ಲಿ ಜೆಡಿಎಸ್ ಅಭ್ಯರ್ಥಿ ಪರವಾಗಿ ಕೆಂಪಯ್ಯ ಅವರು ನಿರಂತರ ಸಂಪರ್ಕದಲ್ಲಿ ಇದ್ದಾರೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಕೆಂಪಯ್ಯ ಅವರು ಬಹಳಷ್ಟು ಜನರನ್ನು ಈಗಾಗಲೇ ಮುಗಿಸಿದ್ದಾರೆ. ಹಾಗಾಗಿ ಈಗ ಸಿಎಂ ಅವರನ್ನು ಮುಗಿಸಲು ಜೆಡಿಎಸ್ ಅಭ್ಯರ್ಥಿ ಜೊತೆ ಸಂಪರ್ಕದಲ್ಲಿ ಇರಬಹುದು ಎಂದರು. ಜೆಡಿಎಸ್ ಬಾದಾಮಿಯಲ್ಲಿ ಯಾರ ಜೊತೆ ಒಳ ಒಪ್ಪಂದ ಮಾಡಿಕೊಳ್ಳದೇ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿದರು.
Comments