ಬಾದಾಮಿಯಲ್ಲೂ ಸಿದ್ದುಗೆ ಸೆಡ್ಡು ಹೊಡೆಯಲು ಮುಂದಾದ ಎಚ್ ಡಿಕೆ...!!

ವಿಧಾನಸಭಾ ಚುನಾವಣೆ ಹತ್ತಿರ ಸಮೀಪಿಸುತ್ತಿದ್ದಂತೆ ರಾಜ್ಯ ರಾಜಕೀಯ ರಂಗೇರುತ್ತಿದೆ. ಸಿಎಂ ಸಿದ್ದರಾಮಯ್ಯ ಸ್ಪರ್ಧಿಸುವ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜಿ.ಟಿ.ದೇವೇಗೌಡರನ್ನು ಕಣಕ್ಕಿಳಿಸಿ ತೊಡೆ ತಟ್ಟಿರುವ ಜೆಡಿಎಸ್, ಇದೀಗ ಬಾದಾಮಿ ಕ್ಷೇತ್ರಕ್ಕೂ ಸವಾಲೊಡ್ಡಲು ಮುಂದಾಗಿದೆ. ಖುದ್ದು ಕುಮಾರಸ್ವಾಮಿಯವರೇ ಮುಂದೆ ನಿಂತು ಪಕ್ಷದ ಅಭ್ಯರ್ಥಿಯ ನಾಮಪತ್ರ ಸಲ್ಲಿಸುವ ಮೂಲಕ ಸಿಎಂಗೆ ಪಂಥಾಹ್ವಾನ ನೀಡಲು ಮುಂದಾಗಿದ್ದಾರೆ.
ಹೌದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಈ ಬಾರಿಯ ಚುನಾವಣೆಯಲ್ಲಿ ಸೋಲಿಸಲೇಬೇಕು ಎಂದು ಪಣತೊಟ್ಟಿರುವ ಜೆಡಿಎಸ್ ವರಿಷ್ಠರು, ಸಿಎಂ ಸ್ಪರ್ಧಿಸಲುದ್ದೇಶಿಸಿರುವ ಎರಡನೇ ಕ್ಷೇತ್ರ ಬಾದಾಮಿಯಲ್ಲೂ ಸೆಡ್ಡು ಹೊಡೆಯಲು ಮುಂದಾಗಿದ್ದಾರೆ. ಸಿಎಂ ಸ್ಪರ್ಧಿಸುವ ಬಾದಾಮಿ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಹನುಮಂತಪ್ಪ ಮಾವಿನಮರದ ಸ್ಪರ್ಧೆ ಮಾಡಲಿದ್ದು, ನಾಳೆ ನಾಮಪತ್ರ ಸಲ್ಲಿಸಲಿದ್ದಾರೆ. ಹನುಮಂತಪ್ಪ ನಾಮಪತ್ರ ಸಲ್ಲಿಕೆ ವೇಳೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಉಪಸ್ಥಿತರಿರಲಿದ್ದು, ನಾಳೆ ಬೆಳಿಗ್ಗೆ 9 ಗಂಟೆಗೆ ಹೆಲಿಕಾಪ್ಟರ್ ಮೂಲಕ ಬಾದಾಮಿಗೆ ಕುಮಾರಸ್ವಾಮಿ ಪ್ರಯಾಣ ಬೆಳೆಸಲಿದ್ದಾರೆ. ಸಿಎಂ ಮತ್ತೊಂದು ಕ್ಷೇತ್ರದಲ್ಲಿ ಸ್ಪರ್ಧಿಸುವ ಚಿಂತನೆ ನಡೆಸಿ ಬಾದಾಮಿಯತ್ತ ಕಣ್ಣು ಹಾಯಿಸುತ್ತಿದ್ದಂತೆ ಜೆಡಿಎಸ್ ಅಲ್ಲಿಯೂ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಸಿಎಂಗೆ ಸವಾಲೊಡ್ಡಲು ಮುಂದಾಗಿದೆ. ಸಿದ್ದರಾಮಯ್ಯ ಅವರನ್ನು ಸೋಲಿಸಲೇಬೇಕು ಎಂದು ಜೆಡಿಎಸ್ ರಣತಂತ್ರ ರೂಪಿಸುತ್ತಿರುವ ಕಾರಣ ಬಾದಾಮಿ ವಿಧಾನಸಭಾ ಕ್ಷೇತ್ರ ಪ್ರತಿಷ್ಠೆಯ ಕಣವಾಗಿದೆ.
Comments