ಮಲ್ಲಿಕಾರ್ಜುನ್ ಖರ್ಗೆಯವರ ಆಪ್ತ ಜೆಡಿಎಸ್ ಗೆ ಸೇರ್ಪಡೆ…!!

ಕರ್ನಾಟಕ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದಂತೆ ರಾಜ್ಯ ರಾಜಕೀಯ ರಂಗೇರುತ್ತಿದೆ. ಅಲ್ಲದೆ ಈ ಬಾರಿ ಪಕ್ಷಾಂತರ ಪರ್ವ ಹೆಚ್ಚಾಗಿದ್ದು , ಟಿಕೆಟ್ ಸಿಗದೆ ಪಕ್ಷದ ನಾಯಕರ ವಿರುದ್ಧ ಮುನಿಸುಕೊಂಡ ಕಾಂಗ್ರೆಸ್ ಮತ್ತು ಬಿಜೆಪಿಯ ಅತೃಪ್ತರು ಜೆಡಿಎಸ್‌ನತ್ತ ವಲಸೆ ಬರುತ್ತಿದ್ದಾರೆ.
ರಾಷ್ಟ್ರೀಯ ಪಕ್ಷಗಳ ಟಿಕೆಟ್ ಆಕಾಂಕ್ಷಿಗಳು ತಮ್ಮ ಪಕ್ಷಗಳನ್ನು ತೊರೆದು ಜೆಡಿಎಸ್‍ನಲ್ಲಿ ಟಿಕೆಟ್ ಪಡೆದು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಪ್ರಯತ್ನ ಮಾಡುತ್ತಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಬಂಡಾಯ ನಾಯಕರು ಜೆಡಿಎಸ್ ವರಿಷ್ಠರನ್ನು ಸಂಪರ್ಕಿಸಿ ಪಕ್ಷ ಸೇರುವ ಬಗ್ಗೆ ಮಾತುಕತೆ ನಡೆಸಿದ್ದಾರೆ. ಜೆಡಿಎಸ್‍ನಲ್ಲಿ ನಿರಂತರವಾಗಿ ಸೇರ್ಪಡೆ ಕಾರ್ಯಕ್ರಮ ನಡೆಯುತ್ತಿದೆ. ನಿನ್ನೆಯಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರಮಾಪ್ತ ಎನಿಸಿಕೊಂಡಿದ್ದ ಪಿ.ರಮೇಶ್ ಜೆಡಿಎಸ್ ಸೇರಿದ್ದಾರೆ. ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ್ ಖರ್ಗೆ ಅವರ ಆಪ್ತರಾಗಿದ್ದ ಪ್ರಸನ್ನಕುಮಾರ್, ಚಾಮರಾಜಪೇಟೆ ಕ್ಷೇತ್ರದಲ್ಲಿ ಜಮೀರ್ ಅಹಮ್ಮದ್ ಖಾನ್ ಅವರ ವಿರೋಧಿ ರಾಜಕಾರಣದಲ್ಲಿ ಗುರುತಿಸಿಕೊಂಡಿದ್ದ ಅಲ್ತಾಫ್ ಖಾನ್, ಬಿಜೆಪಿಯ ಮಾಜಿ ಶಾಸಕ ಹೇಮಚಂದ್ರ ಸಾಗರ್ ಸೇರಿದಂತೆ ಹಲವಾರು ಪ್ರಮುಖರು ಜೆಡಿಎಸ್ ಸೇರಿದ್ದಾರೆ.
ಕಾಂಗ್ರೆಸ್ 218 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿರುವುದರಿಂದ ಅತೃಪ್ತರ ಸಂಖ್ಯೆ ಹೆಚ್ಚಾಗಿದ್ದು, ಟಿಕೆಟ್ ವಂಚಿತರು ಜೆಡಿಎಸ್‍ನತ್ತ ಮುಖ ಮಾಡಿದ್ದಾರೆ. ಇದನ್ನು ಕಂಡು ಆತಂಕಕ್ಕೊಳಗಾಗಿರುವ ಬಿಜೆಪಿ ಮೂರನೇ ಪಟ್ಟಿ ಬಿಡುಗಡೆ ಮಾಡಲು ವಿಳಂಬ ಧೋರಣೆ ಅನುಸರಿಸಿತ್ತು. ಬಿಜೆಪಿ ಅಂತಿಮ ಪಟ್ಟಿ ಬಿಡುಗಡೆಯಾದ ನಂತರ ಇನ್ನಷ್ಟು ಮಂದಿ ಅತೃಪ್ತರು ಜೆಡಿಎಸ್‍ನತ್ತ ಬರುವ ಸಾಧ್ಯತೆಗಳು ದಟ್ಟವಾಗಿದೆ. ಮಾಜಿ ಶಾಸಕ ಎಂ.ಜಿ.ಮೂಳೆ, ಬಿಬಿಎಂಪಿಯ ಸದಸ್ಯ ಆನಂದಕುಮಾರ್, ಮಾಜಿ ಸದಸ್ಯ ಜಿ.ಎಚ್.ರಾಮಚಂದ್ರ ಅವರು ಕೂಡ ಸೇರ್ಪಡೆಯಾಗಿದ್ದಾರೆ. ಈಗಾಗಲೇ ಉಪಮೇಯರ್ ಪುಟ್ಟರಾಜು ಕೂಡ ಜೆಡಿಎಸ್ ಸೇರುವ ಹೊಸ್ತಿಲಲ್ಲಿದ್ದಾರೆ. ಇದಲ್ಲದೆ ಬೆಂಗಳೂರು ಹಾಗೂ ಉತ್ತರ ಕರ್ನಾಟಕದ ಹಲವು ಪ್ರಮುಖ ನಾಯಕರು ಜೆಡಿಎಸ್ ಸೇರುವ ಬಗ್ಗೆ ಮಾತುಕತೆ ನಡೆಸುತ್ತಿದ್ದಾರೆ. ರಾಷ್ಟ್ರೀಯ ಪಕ್ಷಗಳನ್ನು ತೊರೆದು ಪಕ್ಷಕ್ಕೆ ಬರುವ ನಾಯಕರಿಗೆ ಜೆಡಿಎಸ್ ವರಿಷ್ಠರು ಕೂಡ ಟಿಕೆಟ್ ನೀಡುವ ಭರವಸೆಯನ್ನು ನೀಡಿದ್ದಾರೆ. ಹೀಗಾಗಿ ಬಿಜೆಪಿ, ಕಾಂಗ್ರೆಸ್‍ನಲ್ಲಿನ ಅತೃಪ್ತರ ದಂಡು ಜೆಡಿಎಸ್‍ನಲ್ಲಿ ಬೀಡುಬಿಡುತ್ತಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ರಾಜ್ಯದೆಲ್ಲೆಡೆ ಬಹುಮತ ಪಡೆದು ಅಧಿಕಾರದ ಚುಕ್ಕಾಣಿ ಹಿಡಿಯಲು ಪಣ ತೊಟ್ಟಿರುವ ಜೆಡಿಎಸ್ ದಿನದಿಂದ ದಿನಕ್ಕೆ ಪ್ರಬಲಗೊಳ್ಳುತ್ತಿದೆ. ಈ ಎಲ್ಲ ಬೆಳವಣಿಗೆ ಕಂಡ ವಿಪಕ್ಷಗಳು ದಿಗ್ಬ್ರಮೆಗೊಂಡಿದ್ದರೆ.
Comments