ಜೆಡಿಎಸ್ ನ 2 ನೇ ಪಟ್ಟಿ ಬಿಡುಗಡೆಯ ಬಗ್ಗೆ ಸುಳಿವು ಕೊಟ್ಟ ಎಚ್ ಡಿಕೆ
ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ನನ್ನ ಮೊದಲ ಹಂತದ ಪ್ರಚಾರ ಕಾರ್ಯ ಅಂತಿಮವಾಗಿದೆ. ಬುಧವಾರ ಅಭ್ಯರ್ಥಿಗಳ 2 ನೇ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.
ವಿರಾಜಪೇಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಐಎಂಐಎಂ ಪಕ್ಷದ ಅಸದುದ್ದೀನ್ ಉವೈಸಿ, ಜೆಡಿಎಸ್‌ಗೆ ಬೆಂಬಲ ನೀಡುತ್ತಿದ್ದಂತೆ ಕೆರಳಿರುವ ಸಿಎಂ ಸಿದ್ದರಾಮಯ್ಯ ನಮ್ಮನ್ನು ಮತ್ತೊಮ್ಮೆ ಕೋಮುವಾದಿಗಳೆಂದು ಕರೆದಿದ್ದು, ನಮ್ಮ ಮೇಲೆ ಮತ್ತದೇ ಸವಕಲು ಆರೋಪ ಮಾಡಿದ್ದಾರೆಂದು ತಿರುಗೇಟು ನೀಡಿದ್ದಾರೆ. ಜೆಡಿಎಸ್ ಬಿಜೆಪಿಯೊಂದಿಗೆ ಕೈ ಜೋಡಿಸಿದೆ ಎಂಬ ರಾಹುಲ್ ಗಾಂಧಿ ಹೇಳಿಕೆಯನ್ನು ಲೇವಡಿ ಮಾಡಿದ ಎಚ್‌ಡಿಕೆ, ಇದು 'ಪಾಪ ಪಾಂಡು' ಹೇಳಿಕೆ ಎಂದು ವ್ಯಂಗ್ಯವಾಡಿದರು. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಮಗೆ ಗೆಲುವು ಸಿಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಜೆಡಿಎಸ್ ಅಪ್ಪ- ಮಕ್ಕಳ ಪಕ್ಷ ಎಂದು ಹೇಳುತ್ತಿದ್ದವರು ಈಗ ಏನು ಹೇಳುತ್ತಾರೆ. ಯಾವ ಸಾಧನೆಯನ್ನು ನೋಡಿ ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ತಮ್ಮ ಮಗನಿಗೆ ಟಿಕೆಟ್ ಕೊಡಿಸಿದ್ದಾರೆ ಎಂದು ಅವರು ಪ್ರಶ್ನಿಸಿದರು.
ಪ್ರಜ್ವಲ್ ರೇವಣ್ಣ ಅವರಿಗೆ ಈಗಲೇ ಟಿಕೆಟ್ ಬೇಡ ಎಂದು ಕೊಟ್ಟಿಲ್ಲ. ಮುಂದೆ ನೋಡುವ. ಪ್ರಜ್ವಲ್ ರೇವಣ್ಣ ಅವರನ್ನು ಪಕ್ಷದ ಪ್ರಚಾರಕ್ಕೆ ಬಳಸಿಕೊಳ್ಳಲಾಗಿದೆ. ನಾವು ಯಾವುದೇ ಸಮೀಕ್ಷೆಗಳಿಗೆ ತಲೆಕೆಡಿಸಿಕೊಳ್ಳುವುದಿಲ್ಲ, ಅದು ಅಂತಿಮ ಕೂಡ ಅಲ್ಲ. ಈ ಬಾರಿ ಯಾವುದೇ ಕಾರಣಕ್ಕೂ ಕಿಂಗ್ ಮೇಕರ್ ಆಗುವುದಿಲ್ಲ. ನಾವು ಕಿಂಗ್ ಆಗುತ್ತೇವೆ ಎಂದು ಕುಮಾರಸ್ವಾಮಿ ವಿಶ್ವಾಸದಿಂದ ಹೇಳಿದರು. ಚನ್ನಪಟ್ಟಣದಲ್ಲಿ ಕುಮಾರಸ್ವಾಮಿಗೆ ಪತ್ನಿಯನ್ನೇ ಗೆಲ್ಲಿಸಲಾಗಲಿಲ್ಲ ಎಂಬ ಮುಖ್ಯಮಂತ್ರಿ ಹೇಳಿಕೆಗೆ ಕುಮಾರಸ್ವಾಮಿ ತಿರುಗೇಟು ನೀಡಿದರು. ಸಿದ್ದರಾಮಯ್ಯ ಅವರು ಅವರದೆಷ್ಟಿದೆಯೋ ಅಷ್ಟನ್ನು ಮಾತ್ರ ನೋಡಿಕೊಳ್ಳಲಿ. ಚನ್ನಪಟ್ಟಣದಲ್ಲಿ ನನ್ನ ಪತ್ನಿಯನ್ನು ನಿಲ್ಲಿಸಬೇಕೋ ಅಥವಾ ನಾನು ನಿಲ್ಲಬೇಕೋ ಎಂಬುದನ್ನು ಜನ ನಿರ್ಧಾರ ಮಾಡುತ್ತಾರೆ. ಚುನಾವಣೆಯಲ್ಲಿ ಸೋಲು- ಗೆಲುವು ಸಾಮಾನ್ಯ. ಸಿದ್ದರಾಮಯ್ಯ ನಮ್ಮ ಬಗ್ಗೆ ಮಾತನಾಡುವ ಅಗತ್ಯವಿಲ್ಲ. ಸಿದ್ದರಾಮಯ್ಯ ಅವರಿಂದ ನಾನು ಏನನ್ನೂ ಕಲಿಯಬೇಕಿಲ್ಲ ಎಂದು ವಾಗ್ದಾಳಿ ನಡೆಸಿದರು.
Comments