ತ್ರಿಕೋನ ಸ್ಪರ್ಧೆಗೆ ರೆಡಿಯಾದ ದೊಡ್ಡಬಳ್ಳಾಪುರ....ಯಾರು ಹಿತವರು ಈ ಮೂವರೊಳಗೆ?





ಮೂರೂ ಪಕ್ಷಗಳ ಅಧಿಕೃತ ಅಭ್ಯರ್ಥಿಗಳ ಹೆಸರು ಹೊರಬಂದಿದೆ, ಕಾದಾಟಕ್ಕೆ ಅಭ್ಯರ್ಥಿಗಳು ಸಿದ್ದವಾಗಿದ್ದಾರೆ, ಕಾಂಗ್ರೆಸ್ ನಿಂದ ಹಾಲಿ ಶಾಸಕ ವೆಂಕಟರಮಣಯ್ಯ, ಬಿಜೆಪಿಯಿಂದ ಮಾಜಿ ಶಾಸಕ ನರಸಿಂಹಸ್ವಾಮಿ, ಜೆಡಿಎಸ್ ನಿಂದ ಮುನೇಗೌಡರು ಕಣದಲ್ಲಿದ್ದಾರೆ. ಜೋ.ನಾ. ಮಲ್ಲಿಕಾರ್ಜುನ್ ಬಂಡಾಯ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುವ ಹೇಳಿಕೆ ನೀಡಿದ್ದಾರೆ, ಕಳೆದ ಬಾರಿ ಜೆಡಿಎಸ್ ನಿಂದ ಬಂಡಾಯವಾಗಿ ಸ್ಪರ್ಧಿಸಿ ತೀವ್ರ ಪೈಪೋಟಿ ನೀಡಿದ್ದ ಮುನೇಗೌಡರಿಗೆ ಜೆಡಿಎಸ್ ಟಿಕೆಟ್ ನೀಡಿದೆ. ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ, ತೀವ್ರ ಪೈಪೋಟಿ ಇರುವ ಚುನಾವಣೆಯಲ್ಲಿ ಯಾರೇ ಗೆದ್ದರೂ ಕಡಿಮೆ ಅಂತರದಿಂದ ಗೆಲ್ಲುತ್ತಾರೆ. ಕಣದಲ್ಲಿರುವ ಮೂವರೂ ಪ್ರಬಲರಾಗಿದ್ದಾರೆ, ಪಕ್ಷದ ಜೊತೆಗೆ ತಮ್ಮ ವೈಯುಕ್ತಿಕ ವರ್ಚಸ್ಸು ಮೂವರಿಗೂ ಇದೆ, ಅಚ್ಚರಿಯ ಪಲಿತಾಂಶ ಬರುವುದಂತೂ ಗ್ಯಾರಂಟಿ. ಮೂಲಸೌಕರ್ಯಗಳಿಲ್ಲದ, ಬರಗಾಲದಿಂದ ಬಳಲುತ್ತಿರುವ ಈ ಕ್ಷೇತ್ರಕ್ಕೆ ಸರ್ಕಾರದ ವಿವಿಧ ಭಾಗ್ಯಗಳನ್ನು ಕೊಟ್ಟು ಶಾಸಕ ವೆಂಕಟರಮಣಯ್ಯ ಮತ ಕೇಳಲು ಮುಂದಾಗಿದ್ದಾರೆ, ಕಾಂಗ್ರೆಸ್ನ ಜನ ವಿರೋಧಿ ನೀತಿಯನ್ನು ಪ್ರಚಾರದಲ್ಲಿಟ್ಟು ಮತ ಕೇಳಲು ಬಿಜೆಪಿ, ಜೆಡಿಎಸ್ ಮುಂದಾಗಿವೆ.
ಶಾಶ್ವತ ನೀರಾವರಿ ಯೋಜನೆ ಕುರಿತು ಮೂರೂ ಪಕ್ಷಗಳು ಮಾತನಾಡುತ್ತಿಲ್ಲ. 276 ಬೂತ್ ಗಳಿರುವ ಈ ಕ್ಷೇತ್ರದಲ್ಲಿ ಒಟ್ಟು 1,99,678 ಮತದಾರರಿದ್ದಾರೆ, ಅದರಲ್ಲಿ ಪುರುಷರು 1,00,433 ಮಂದಿ ಹಾಗೂ ಮಹಿಳೆಯರು 99,240 ಮಂದಿ ಇದ್ದಾರೆ.
Comments