ಸಿದ್ದರಾಮಯ್ಯನವರ ಹೇಳಿಕೆಗೆ ತಿರುಗೇಟು ಕೊಟ್ಟ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ
ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಚಾಮುಂಡೇಶ್ವರಿ ಕ್ಷೇತ್ರದ ರಾಜಕೀಯ ರಂಗೇರುತ್ತಿದೆ. ಚಾಮುಂಡೇಶ್ವರಿ ಕ್ಷೇತ್ರವೊಂದರಲ್ಲೇ ಸ್ಪರ್ಧಿಸುವ ಸಿಎಂ ಸಿದ್ದರಾಮಯ್ಯನವರ ನಿರ್ಧಾರವನ್ನು ಹಾಲಿ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಅವರು ಸ್ವಾಗತಿಸಿದ್ದಾರೆ.
ಸಿದ್ದರಾಮಯ್ಯ ಕೇಳಿದಂತೆ ಅವರಿಗೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮೋಕ್ಷ ಪ್ರಾಪ್ತಿ ಮಾಡಿಕೊಡುತ್ತೇವೆ ಎಂದು ಜಿ.ಟಿ.ಡಿ ವ್ಯಂಗ್ಯವಾಡಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದಲ್ಲೇ ತನಗೆ ರಾಜಕೀಯ ಜನ್ಮ, ಮರುಜನ್ಮವಾಗಿದೆ. ಇಲ್ಲಿಯೇ ನನ್ನ ಕೊನೆಯ ಚುನಾವಣೆ ಆಗಲಿದೆ ಎಂಬ ಸಿದ್ದರಾಮಯ್ಯನವರ ಹೇಳಿಕೆಗೆ ಜಿ.ಟಿ.ದೇವೇಗೌಡರು ತಿರುಗೇಟು ನೀಡಿದ್ದಾರೆ. ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿಯಲ್ಲಿ ಮಾತ್ರ ನಿಲ್ಲುತ್ತಿರುವುದನ್ನು ಸ್ವಾಗತ ಮಾಡುತ್ತೀವಿ. ಇಲ್ಲೇ ಮೋಕ್ಷ ಆಗಬೇಕು ಎನ್ನೋ ಅವರ ಆಸೆಯನ್ನು ನಾವು ನೆರವೇರಿಸುತ್ತೀವಿ ಎಂದು ಚಾಮುಂಡೇಶ್ವರಿ ಕ್ಷೇತ್ರದ ಹಾಲಿ ಶಾಸಕರು ಹೇಳಿದ್ದಾರೆ. ಇದೇ ವೇಳೆ, ಸಿದ್ದರಾಮಯ್ಯನವರ ನಿರ್ಧಾರವನ್ನು ಎಚ್.ಡಿ. ಕುಮಾರಸ್ವಾಮಿ ಕೂಡ ಸ್ವಾಗತಿಸಿದ್ದಾರೆ. ಸಿದ್ದರಾಮಯ್ಯ ಎಷ್ಟು ಕ್ಷೇತ್ರದಲ್ಲಿ ಬೇಕಾದರೂ ನಿಲ್ಲಲಿ. ಆದರೆ ಚಾಮುಂಡೇಶ್ವರಿಯಲ್ಲಿ ಗೆಲ್ಲೋದು ಮಾತ್ರ ಜಿ.ಟಿ.ದೇವೇಗೌಡರೇ. ಎರಡು ದಿನಗಳಿಂದ ಇಲ್ಲಿ ಪ್ರವಾಸ ಮಾಡುತ್ತಿದ್ದು ಜೆಡಿಎಸ್ಗೆ ಅಭೂತಪೂರ್ವ ಜನಬೆಂಬಲ ಇರುವುದು ನಿಶ್ಚಳವಾಗಿದೆ. ಹೋದಲೆಲ್ಲ ಸ್ವಯಂಪ್ರೇರಿತವಾಗಿ ಜನರು ಬೆಂಬಲ ಘೋಷಿಸುತ್ತಿದ್ದಾರೆ. ಸಿದ್ದರಾಮಯ್ಯ ಒಂದರಲ್ಲಿ ನಿಂತರೂ ಸರಿ, ಎರಡರಲ್ಲಿ ನಿಂತರೂ ಸರಿ ಗೆಲ್ಲೋದು ಮಾತ್ರ ಜಿ.ಟಿ.ದೇವೇಗೌಡರೇ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.
Comments