ಜಮೀರ್ ಗೆ ಸೆಡ್ಡು ಹೊಡೆಯಲು ಮುಂದಾದ ಮಾಜಿ ಕಾರ್ಪೋರೇಟರ್…!!
ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜಕೀಯದ ಕಾವು ಹೆಚ್ಚಿತ್ತಿದೆ. ಜಮೀರ್ ಅಹಮದ್ ಮತ್ತು ಲಕ್ಷ್ಮೀನಾರಾಯಣನನ್ನು ಸೋಲಿಸಲು ಜೆಡಿಎಸ್ ನ ಅಲ್ತಾಫ್ ಜತೆ ಕೈ ಜೋಡಿಸಲು ಸಿದ್ದವಾದ ಮಾಜಿ ಕಾರ್ಪೋರೇಟರ್ ಬಿ.ವಿ.ಗಣೇಶ್. ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಬಿ.ವಿ.ಗಣೇಶ್ ಮತ್ತು ಮಾಜಿ ಉಪಮೇಯರ್ ಲಕ್ಷ್ಮೀನಾರಾಯಣ ಆಕಾಂಕ್ಷಿಗಳು.
ಪ್ರಸಕ್ತ ಪರಿಸ್ಥಿತಿಯಲ್ಲಿ ಬಿ.ವಿ.ಗಣೇಶ್ ಗೆ ಟಿಕೆಟ್ ಸಿಗುವ ಸಾಧ್ಯತೆಗಳು ಕಡಿಮೆ ಇದೆ. ಲಕ್ಷ್ಮೀನಾರಾಯಣಗೆ ಟಿಕೆಟ್ ಸಿಗುವ ಸಾಧ್ಯತೆಗಳು ಜಾಸ್ತಿ ಇದೆ. ಇದು ಬಿ.ವಿ.ಗಣೇಶ್ ರನ್ನು ಕೆರಳಿಸಿದೆ. ಅದೇ ವೇಳೆ ಜೆಡಿಎಸ್ ತೊರೆದು ಕಾಂಗ್ರೆಸ್ ಗೆ ವಲಸೆ ಹೋಗಿರುವ ಜಮೀರ್ ಅಹಮದ್ ರನ್ನು ಸೋಲಿಸಲು ಜೆಡಿಎಸ್ ಅಭ್ಯರ್ಥಿ ಅಲ್ತಾಫ್ ಪಣತೊಟ್ಟಿದ್ದಾರೆ. ಅದಕ್ಕೆ ಬಿಜೆಪಿಯ ಅತೃಪ್ತ ಆಕಾಂಕ್ಷಿ ಬಿ.ವಿ.ಗಣೇಶ್ ಗೆ ಅಲ್ತಾಫ್ ಗಾಳ ಹಾಕಿದ್ದಾರೆ. ಚಾಮರಾಜಪೇಟೆಯಲ್ಲಿ ಸ್ಥಳೀಯ ಹಿಂದೂಗಳು ತಮ್ಮ ವಿರುದ್ಧ ಸ್ಪರ್ಧಿಸುವುದಾದರೆ, ಅವರಿಗೆ ತಾವು ಸಹಕರಿಸಲು ಸಿದ್ದ. ಆದರೆ, ಆವಲಹಳ್ಳಿಯಿಂದ ಚಾಮರಾಜಪೇಟೆಗೆ ವಲಸೆ ಬಂದಿರುವ ಲಕ್ಷ್ಮೀನಾರಾಯಣ ಸ್ಪರ್ಧಿಸುವುದಾದರೆ, ತನ್ನ ಪರವಾಗಿ ಕೆಲಸ ಮಾಡಿ, ಜಮೀರ್ ಅಹಮದ್ ನನ್ನು ಸೋಲಿಸಲು ನೆರವಾಗಿ ಅಂತಾ ಗಣೇಶ್ ಗೆ ಅಲ್ತಾಫ್ ಆಫರ್ ಕೊಟ್ಟಿದ್ದಾರೆ ಎನ್ನಲಾಗಿದೆ. ಮೇಲಾಗಿ ಲಕ್ಷ್ಮೀನಾರಾಯಣ ಹೇಳಿಕೇಳಿ ಮಾಜಿ ಸಚಿವ ವಿ.ಸೋಮಣ್ಣ ಬೆಂಬಲಿಗ. ವಿ.ಸೋಮಣ್ಣ ಅವರಿಗೆ ಗೋವಿಂದ ರಾಜನಗರ ಹಾಗೂ ಅವರ ಮತ್ತೊಬ್ಬ ಬೆಂಬಲಿಗ ರವೀಂದ್ರಗೆ ವಿಜಯನಗರದ ಟಿಕೆಟ್ ನೀಡಲಾಗಿದೆ. ಹಾಗಿದ್ದ ಮೇಲೆ ಪಕ್ಕದ ಚಾಮರಾಜಪೇಟೆಯ ಟಿಕೆಟ್ ಕೂಡ ಸೋಮಣ್ಣ ಬೆಂಬಲಿಗರಿಗೆ ಯಾಕೆ ಕೊಡಬೇಕು ಎಂಬುದು ಬಿ.ವಿ.ಗಣೇಶ್ ವಾದ. ಹೀಗಾಗಿ ಶತ್ರುವಿನ ಶತ್ರು ತಮಗೆ ಮಿತ್ರ ಎಂಬ ಪರಿಸ್ಥಿತಿ ಉಂಟಾಗಿದೆ.
Comments