ಕುತೂಹಲ ಕೆರಳಿಸಿದ ಆರ್.ಆರ್. ನಗರಕ್ಕೆ ಜೆಡಿಎಸ್ ಅಭ್ಯರ್ಥಿ ಫಿಕ್ಸ್..!!

14 Apr 2018 1:27 PM |
2297 Report

ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರಕ್ಕೆ ಜೆಡಿಎಸ್‍ನಿಂದ ಪ್ರಜ್ವಲ್ ರೇವಣ್ಣ, ನಗರ ಘಟಕದ ಅಧ್ಯಕ್ಷ ಆರ್.ಪ್ರಕಾಶ್ ಸೇರಿದಂತೆ ಹಲವರ ಹೆಸರು ಕೇಳಿಬಂದಿತ್ತು. ಆದರೆ, ಅಂತಿಮವಾಗಿ ಮಾಜಿ ಡಿಸಿಎಂ ಆರ್.ಅಶೋಕ್ ಅವರ ಕಟ್ಟಾ ಬೆಂಬಲಿಗ, ಬಿಬಿಎಂಪಿ ಸದಸ್ಯ ರಾಮಚಂದ್ರ ಈ ಕ್ಷೇತ್ರಕ್ಕೆ ದಳಪತಿಯಾಗುತ್ತಿದ್ದಾರೆ. ರಾಮಚಂದ್ರ ಅವರನ್ನು ಆರ್.ಆರ್.ನಗರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‍ನಿಂದ ಸ್ಪರ್ಧಿಸಲು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಸಿರು ನಿಶಾನೆ ತೋರಿದ್ದಾರೆ.

ಕಳೆದ ಚುನಾವಣೆಯಲ್ಲಿಯೇ ರಾಮಚಂದ್ರ ಅವರು ಬಿಜೆಪಿಯಿಂದ ಸ್ಪರ್ಧಿಸಲು ಟಿಕೆಟ್ ಆಕಾಂಕ್ಷಿಯಾಗಿದ್ದರು. ಆಗ ಆರ್.ಅಶೋಕ್ ಅವರು ಮುಂದಿನ ಚುನಾವಣೆಯಲ್ಲಿ ನಿಮಗೆ ಟಿಕೆಟ್ ಕೊಡಲಾಗುತ್ತದೆ ಎಂದು ಭರವಸೆ ನೀಡಿ ಎಂ.ಶ್ರೀನಿವಾಸ್‍ಗೆ ಟಿಕೆಟ್ ಕೊಟ್ಟಿದ್ದರು. ಅಶೋಕ್ ಅವರ ಮಾತನ್ನು ನಂಬಿದ್ದ ರಾಮಚಂದ್ರ ಅವರು ತಾನೇ ಬಿಜೆಪಿ ಅಭ್ಯರ್ಥಿ ಎಂದುಕೊಂಡು ಕಾರ್ಯತತ್ಪರರಾದರು. ಆದರೆ, ಈ ಬಾರಿಯೂ ಕೂಡ ಅವರಿಗೆ ಬಿಜೆಪಿ ಟಿಕೆಟ್ ಕೈತಪ್ಪಿದ್ದು, ಅಶೋಕ್ ವಿರುದ್ಧ ರಾಮಚಂದ್ರ ಮುನಿಸಿಕೊಂಡಿದ್ದಾರೆ. ಹಾಗಾಗಿ ಪಕ್ಷೇತರರಾಗಿ ಸ್ಪರ್ಧಿಸಲು ತೀರ್ಮಾನಿಸಿದ್ದರು. ಇದನ್ನೆಲ್ಲಾ ಅರಿತ ದೇವೇಗೌಡರು, ರಾಮಚಂದ್ರ ಅವರನ್ನು ಜೆಡಿಎಸ್‍ಗೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ. ಐಎಎಸ್ ಅಧಿಕಾರಿ ದಿ.ಡಿ.ಕೆ.ರವಿ ಅವರ ಮಾವ ಹನುಮಂತರಾಯಪ್ಪ, ಜೆಡಿಎಸ್ ನಗರ ಘಟಕದ ಆರ್.ಪ್ರಕಾಶ್, ಲಗ್ಗೆರೆ ನಾರಾಯಣಸ್ವಾಮಿ, ಶಾಸಕ ಮುನಿರತ್ನ ವಿರುದ್ಧ ಮುನಿಸಿಕೊಂಡಿದ್ದ ಜ್ಞಾನಭಾರತಿ ವಾರ್ಡ್ ಬಿಬಿಎಂಪಿ ಮಾಜಿ ಸದಸ್ಯ ಗೋವಿಂದರಾಜು, ಎಚ್‍ಎಂಟಿ ವಾರ್ಡ್‍ನ ಕಾಂಗ್ರೆಸ್ ಸದಸ್ಯೆ ಆಶಾ ಅವರ ಪತಿ ಸುರೇಶ್ ಮತ್ತಿತರರು ಜೆಡಿಎಸ್‍ಗೆ ಬೆಂಬಲಿಸಲು ಮನಸ್ಸು ಮಾಡಿರುವುದರಿಂದ ರಾಮಚಂದ್ರ ಅವರಿಗೆ ಆನೆ ಬಲ ಬಂದಂತಾಗಿದೆ.

Edited By

Shruthi G

Reported By

hdk fans

Comments