ಬೊಂಬೆನಗರಿಯ ರಾಜಕೀಯದ ಬಗ್ಗೆ ಭವಿಷ್ಯ ನುಡಿದ ದೇವೇಗೌಡ್ರು...!!

ಬೊಂಬೆನಗರಿ ಚನ್ನಪಟ್ಟಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಾರಿಗೆ ಸಚಿವ ಎಚ್.ಎಂ.ರೇವಣ್ಣ ಸ್ಪರ್ಧೆ ಕುರಿತಂತೆ ಪ್ರತಿಕ್ರಿಯಿಸಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು, ಯಾರೇ ಬಂದರೂ ಚನ್ನಪಟ್ಟಣ ಮತ್ತು ರಾಮನಗರದಲ್ಲಿ ಗೆಲುವು ಕುಮಾರಸ್ವಾಮಿಯದ್ದೇ ಎಂದು ಭವಿಷ್ಯ ನುಡಿದಿದ್ದಾರೆ.
ರಾಮನಗರದಲ್ಲಿ ಜೆಡಿಎಸ್ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು, ರೇವಣ್ಣ ಸ್ಪರ್ಧೆಯಲ್ಲಿ ಯಾವ ಆಶ್ಚರ್ಯ ಇಲ್ಲ. ನಾನು ಕನಕಪುರದಲ್ಲಿ ಲೋಕಸಭೆಗೆ ಸ್ಪರ್ಧಿಸಿದ್ದಾಗ ಹೆಗಡೆ, ಮಲ್ಯ, ಸುಬ್ರಮಣ್ಯಸ್ವಾಮಿ, ಎಸ್.ಎಂ.ಕೃಷ್ಣ ಎಲ್ಲರೂ ಸೇರಿ ಡಿ.ಕೆ.ಶಿವಕುಮಾರ್ ಅವರನ್ನ ನಿಲ್ಲಿಸಿದ್ದರು, ಅನಂತ್ ಕುಮಾರ್ ಮತ್ತು ಹಲವರು ಸೇರಿ ಕೆ.ಎಸ್.ಈಶ್ವರಪ್ಪನವರನ್ನು ಸಹ ೨೦೦೨ರಲ್ಲಿ ನಡೆದ ಕನಕಪುರ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಣಕ್ಕಿಳಿಸಿದ್ದರು. ಆದರೆ, ನಾನು ಅವರಿಬ್ಬರ ವಿರುದ್ಧವೂ ಗೆಲ್ಲಲಿಲ್ಲವೇ ಎಂದು ನಗೆಬೀರಿದ್ದಾರೆ. ಅವತ್ತಿಗೆ ನಾನು ೫೬ ಸಾವಿರಕ್ಕೂ ಹೆಚ್ಚು ಮತಗಳನ್ನ ತೆಗೆದುಕೊಂಡು ಗೆದ್ದಿದ್ದೆ. ಹಾಗಾಗಿ, ಹೆಚ್.ಎಂ. ರೇವಣ್ಣ ಸ್ಪರ್ಧೆಯಿಂದ ಚಿಂತೆ ಇಲ್ಲ. ಅನಿತಾ ಕುಮಾರಸ್ವಾಮಿಯವರನ್ನೆ ಸ್ಪರ್ಧೆಗೆ ಇಳಿಸಬೇಕೆಂದು ಅಲ್ಲಿನ ಜನ ಬಯಸಿದ್ದರು. ಆದರೆ, ಕುಮಾರಸ್ವಾಮಿಯವರು ನಮ್ಮ ಕುಟುಂಬದಲ್ಲಿ ಇಬ್ಬರೇ ಚುನಾವಣೆ ಎದುರಿಸೋದು ಎಂಬ ನಿರ್ಣಯಕ್ಕೆ ಬಂದರು. ಹಾಗಾಗಿ, ಎರಡೂ ಕಡೆ ಅವರೇ ಸ್ಪರ್ಧಿಸಬೇಕಾಯ್ತು ಎಂದರು.
Comments