ಜೆಡಿಎಸ್‌ನಿಂದ ಕಣಕ್ಕಿಳಿಯಲಿರುವ ಐಎಎಸ್ ಅಧಿಕಾರಿಯ ತಾಯಿ..!!
ಕರ್ನಾಟಕ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ತುಮಕೂರು ಜಿಲ್ಲೆಯ ಕುಣಿಗಲ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಐಎಎಸ್ ಅಧಿಕಾರಿ ಡಿ.ಕೆ.ರವಿ ಅವರ ತಾಯಿ ಗೌರಮ್ಮ ಅವರು, ಜನರ ಒತ್ತಾಯದಿಂದ ಕೋಲಾರ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಲು ಪಕ್ಷದ ವರಿಷ್ಠರಾದ ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಚರ್ಚಿಸಿದ್ದೇನೆ. ಅವರು ಕೆಲವೇ ದಿನಗಳಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ಎಂದು ಹೇಳಿದರು.
ಒಂದು ವೇಳೆ ಜೆಡಿಎಸ್‌ನಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದರೆ, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ. ಯಾವುದೇ ಕಾರಣಕ್ಕೂ ಚುನಾವಣೆಯಿಂದ ಹಿಂದೆ ಸರಿಯುವ ಪ್ರಶ್ನೆ ಇಲ್ಲ. ಕೋಲಾರದ ಜನರ ಮನದಲ್ಲಿ ನನ್ನ ಮಗ ಡಿ.ಕೆ.ರವಿ ಛಾಪು ಮೂಡಿಸಿದ್ದಾನೆ. ಅವನು ಮಾಡಬೇಕಾಗಿದ್ದ ಕೆಲಸ ಸಾಕಷ್ಟಿತ್ತು. ಅವನು ಬಿಟ್ಟು ಹೋದ ಕೆಲಸ ಪೂರ್ಣಗೊಳಿಸಲು ಹಾಗೂ ನನ್ನ ಮಗನ ಸಾವಿನ ಸತ್ಯಾಂಶ ಬಯಲು ಮಾಡಲು, ನ್ಯಾಯಕ್ಕಾಗಿ ಜನರ ಮುಂದೆ ಹೋಗಲು ತೀರ್ಮಾನಿಸಿದ್ದೇನೆ ಎಂದು ಹೇಳಿದರು. ಈ ನಿಟ್ಟಿನಲ್ಲಿ ಕಳೆದ ಎರಡು ತಿಂಗಳುಗಳಿಂದ ಕೋಲಾರ ಕ್ಷೇತ್ರದ ಸಾಕಷ್ಟುಗ್ರಾಮಗಳ ಜನರನ್ನು ಭೇಟಿಯಾಗಿ ಚರ್ಚಿಸಿದ್ದು, ಎಲ್ಲರೂ ಬೆಂಬಲಿಸುವ ಭರವಸೆ ನೀಡಿದ್ದಾರೆ. ನಾನು ಚುನಾವಣೆಗೆ ನಿಲ್ಲುವ ಮಾಹಿತಿ ಪಡೆದ ಕೆಲವು ಪಕ್ಷಗಳು ನನ್ನನ್ನು ಪ್ರಚಾರದ ಸರಕನ್ನಾಗಿಸಲು ಯತ್ನಿಸಿದರು. ಇದನ್ನು ನಾನು ಬಲವಾಗಿ ವಿರೋಧಿಸಿ, ಜೆಡಿಎಸ್‌ನಿಂದ ಸ್ಪರ್ಧಿಸಲು ನಿರ್ಧರಿಸಿದ್ದೇನೆ. ಕೋಲಾರದ ಜನ ನಮ್ಮೊಂದಿಗಿದ್ದಾರೆ ಎನ್ನುವ ಸಂಪೂರ್ಣ ಭರವಸೆ ನನಗೆ ಇದೆ. ಈಗಾಗಲೇ ಕೋಲಾರ ಪಟ್ಟಣದಲ್ಲೇ ಮನೆ ಮಾಡಿದ್ದು, ನಿತ್ಯ ಜನಸಂಪರ್ಕದಲ್ಲಿದ್ದೇನೆ ಎಂದರು.
Comments