ನರೇಂದ್ರ ಮೋದಿ ಯವರಿಗೆ ಟಾಂಗ್‌ ಕೊಟ್ಟ ದೇವೇಗೌಡ್ರು

09 Apr 2018 9:24 AM |
4913 Report

ನಗದು ರಹಿತ ವ್ಯವಹಾರವನ್ನು ಕಾರ್ಯರೂಪಕ್ಕೆ ತರಲು ಸಾಧ್ಯವಾಗಿಲ್ಲ ಹಾಗೂ 'ಮೇಕ್‌ ಇನ್‌ ಇಂಡಿಯಾ' ಕೂಡ ಯಶಸ್ವಿಯಾಗಲಿಲ್ಲ ಎಂದು ಜೆಡಿಎಸ್‌ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟಾಂಗ್‌ ನೀಡಿದ್ದಾರೆ.

ಬಸವನಗುಡಿ ವಿಧಾನಸಭಾ ಕ್ಷೇತ್ರದ ಗಿರಿನಗರ ಅವಧಾನಿ ಕನ್ವೆನ್ಷನ್‌ ಸೆಂಟರ್‌ನಲ್ಲಿ ಕರ್ನಾಟಕ ಜೈನ್‌ ಚಾರಿಟೇಬಲ್‌ ಸೇವಾ ಟ್ರಸ್ಟ್‌ ವತಿಯಿಂದ ಹಮ್ಮಿಕೊಂಡಿದ್ದ ಜೈನ್‌ ಸಮಾಜದ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರವು ಜಿಎಸ್‌ಟಿಯನ್ನು ಜಾರಿಗೊಳಿಸಿದೆ. ಇದರಿಂದ ಜನಸಾಮಾನ್ಯರಿಗೆ ಯಾವುದೇ ಪ್ರಯೋಜನವಾಗಲಿಲ್ಲ. ಬದಲಿಗೆ ಸಮಸ್ಯೆಗೆ ಸಿಲುಕುವಂತಾಯಿತು. ವ್ಯಾಪಾರಸ್ಥರು ಸಾಕಷ್ಟುತೊಂದರೆ ಅನುಭವಿಸುವಂತಾಗಿದೆ. ಇದು ಕೇಂದ್ರ ಸರ್ಕಾರಕ್ಕೆ ಈಗ ಮನವರಿಕೆಯಾಗಿದೆ ಎಂದು ಲೇವಡಿ ಮಾಡಿದರು. ರಾಷ್ಟ್ರದಲ್ಲಿ ನಗದು ರಹಿತ ವ್ಯವಹಾರ ಜಾರಿಗೊಳಿಸುವ ಭರವಸೆಯನ್ನು ಕೇಂದ್ರ ಸರ್ಕಾರ ನೀಡಿತ್ತು. ಆದರೆ ಅದು ವಿಫಲವಾಯಿತು. ನಗದು ರಹಿತ ವ್ಯವಹಾರ ಕಾರ್ಯರೂಪಕ್ಕೆ ತರುವಲ್ಲಿ ಎಡವಿತು. ಪರಿಣಾಮ ಕಾರ್ಯಕ್ರಮ ಅನುಷ್ಠಾನಗೊಳಿಸಲು ಸಾಧ್ಯವಾಗಲಿಲ್ಲ. ಇನ್ನು 'ಮೇಕ್‌ ಇನ್‌ ಇಂಡಿಯಾ'ದ ಬಗ್ಗೆ ಕೇವಲ ಹೇಳಿಕೆ ನೀಡಿದ್ದೆ ಬಂತೇ ಹೊರತು ನಿರೀಕ್ಷಿತಮಟ್ಟದಲ್ಲಿ ಯಶಸ್ವಿಯಾಗಲಿಲ್ಲ ಎಂದರು. ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ ಸರ್ಕಾರ ಬರಲಿದೆ ಎಂಬ ವಿಶ್ವಾಸ ಇದೆ. ರಾಜ್ಯದ ಜನತೆ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್‌-ಬಿಜೆಪಿ ಕಾರ್ಯವೈಖರಿ ಬಗ್ಗೆ ಬೇಸತ್ತಿದ್ದಾರೆ. ಅಭಿವೃದ್ಧಿಗಿಂತ ಆರೋಪ-ಪ್ರತ್ಯಾರೋಪದಲ್ಲಿ ತೊಡಗಿವೆ. ಹೀಗಾಗಿ ಕುಮಾರಸ್ವಾಮಿ ನೇತೃತ್ವದ ಪ್ರಾದೇಶಿಕ ಪಕ್ಷ ಜೆಡಿಎಸ್‌ಗೆ ಬೆಂಬಲ ನೀಡುವ ಭರವಸೆ ಇದೆ ಎಂದು ಹೇಳಿದರು. 

Edited By

Shruthi G

Reported By

hdk fans

Comments