ಜಗದೀಶ್ ಶೆಟ್ಟರ್ ಹೇಳಿಕೆಗೆ ತಿರುಗೇಟು ಕೊಟ್ಟ ಎಚ್ ಡಿಕೆ
ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರು, ಕುಮಾರಸ್ವಾಮಿಗೆ ಸೋಲಿನ ಭಯವಿದೆ. ಹೀಗಾಗಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದ್ದಾರೆ ಎಂದಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿಕೆಗೆ ತಿರುಗೇಟು ನೀಡಿದ ಅವರು, ನನಗೆ ಸೋಲಿನ ಭಯವಿಲ್ಲ. ನನ್ನ ಕರ್ಮಭೂಮಿಯಾದ ರಾಮನಗರದಿಂದಲೇ ಸ್ಪರ್ಧಿಸುತ್ತೇನೆ. ಕಾರ್ಯಕರ್ತರ ಅಪೇಕ್ಷೆ ಮೇರೆಗೆ ನಾನು ಇನ್ನೊಂದು ಕ್ಷೇತ್ರದಲ್ಲಿ ಸ್ಪರ್ಧಿಸಬೇಕಾಗಿದೆ. ಇದೇ ಪ್ರಶ್ನೆಯನ್ನ ನರೇಂದ್ರ ಮೋದಿ ಅವರಿಗೆ ಕೇಳಿ. ಲಘುವಾಗಿ ಮಾತನಾಡುವುದನ್ನು ಶೆಟ್ಟರ್ ನಿಲ್ಲಿಸಬೇಕು ಎಂದು ಕುಟುಕಿದರು.
ಎರಡು ರಾಷ್ಟ್ರೀಯ ಪಕ್ಷಗಳಿಗೆ ಜೆಡಿಎಸ್ ಪಕ್ಷ ಕಂಡರೆ ಭಯ ಶುರುವಾಗಿದೆ. ನಾನು ಕಿಂಗ್ ಮೇಕರ್ ಆಗಲ್ಲ, ಕಿಂಗ್ ಆಗುತ್ತೇನೆ. ರಾಜ್ಯದ ಜನರು ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಎರಡು ರಾಷ್ಟ್ರೀಯ ಪಕ್ಷಗಳ ಭ್ರಷ್ಟ ಆಡಳಿತ ನೋಡಿ ರಾಜ್ಯದ ಜನ ಬೇಸತ್ತಿದ್ದಾರೆ. ಹೀಗಾಗಿ, ಜೆಡಿಎಸ್ ಪರ ರಾಜ್ಯದ ಜನರ ಒಲವು ಹೆಚ್ಚಾಗಿದೆ. ನನಗೆ ಸಂಪೂರ್ಣ ವಿಶ್ವಾಸವಿದೆ. 113 ಸೀಟ್‌ಗಳನ್ನು ನಾವು ಕ್ರಾಸ್ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಉತ್ತರ ಕರ್ನಾಟಕದಲ್ಲಿ 45 ಸ್ಥಾನಗಳ ಟಾರ್ಗೆಟ್ ಇಟ್ಟುಕೊಂಡಿದ್ದು, 35 ಸ್ಥಾನವನ್ನು ಗೆಲ್ಲುತ್ತೇವೆ. ಒಟ್ಟಾರೆ ಹಳೇ ಕರ್ನಾಟಕದಲ್ಲಿ 75 ಸ್ಥಾನಗಳನ್ನು ಜಯಗಳಿಸುತ್ತೇವೆ ಎಂದು ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು. ನಾನು ಸಮ್ಮಿಶ್ರ ಸರ್ಕಾರದಲ್ಲಿ ಪಾಲುದಾರನಾಗಲು ಇಷ್ಟಪಡುವುದಿಲ್ಲ. ಬಹುಮತ ಸಿಗದಿದ್ದರೆ ವಿಪಕ್ಷ ಸ್ಥಾನದಲ್ಲಿ ಕೂರುತ್ತೇವೆ. ಆದರೆ ನಮ್ಮ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂಬ ಸ್ಪಷ್ಟ ವಿಶ್ವಾಸವಿದೆ ಎಂದು ಹೇಳಿದರು.
Comments