ಸೋಲಿನ ಮುನ್ಸೂಚನೆ ಅರಿತು ಕಂಗೆಟ್ಟ ಸಿ.ಪಿ.ಯೋಗೇಶ್ವರ್...!!
ಕರ್ನಾಟಕ ವಿಧಾನ ಸಭಾ ಹತ್ತಿರ ಸಮೀಪಿಸುತ್ತಿದ್ದಂತೆ ಚನ್ನಪಟ್ಟಣ ಕ್ಷೇತ್ರದ ಲ್ಲಿ ರಾಜಕೀಯದ ಕಾವು ಹೆಚ್ಚುತ್ತಿದೆ. ಚನ್ನಪಟ್ಟಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಅವರ ಮೂವತ್ತು ಕೋಟಿ ರೂ. ಆರೋಪಕ್ಕೆ ಜೆಡಿಎಸ್ ಪಕ್ಷ ಸ್ಪಷ್ಟೀಕರಣ ನೀಡಿದೆ.
ಸಿದ್ದಿಗೋಷ್ಠಿಯೊಂದಿಗೆ ಮಾತನಾಡಿದ ಜೆಡಿಎಸ್ ಪಕ್ಷದ ಮಾಜಿ ಶಾಸಕ ಎಂ. ಸಿ. ಅಶ್ವಥ್ ಅವರು, ಮೂವತ್ತು ಕೋಟಿ ವಿಚಾರ ನಮ್ಮ ಆರೋಪವಲ್ಲ, ಯೋಗೇಶ್ವರ್ ಅವರೇ ಕ್ಷೇತ್ರಾದ್ಯಂತ ಹಬ್ಬಿಸಿದ್ದ ಅಪಪ್ರಚಾರ. ಅದು ಅವರೇ ಹುಟ್ಟಿಸಿದ ಪಾಪದ ಕೂಸು. ಅವರಿಂದ ಜನಿಸಿದ ಈ ಸುಳ್ಳಿಗೆ ಜೆಡಿಎಸ್ ಪಕ್ಷ ಸ್ಪಷ್ಟೀಕರಣ ನೀಡುವ ಅಗತ್ಯವೇ ಇಲ್ಲ ಎಂದಿದ್ದಾರೆ. ಚನ್ನಪಟ್ಟಣ ಕ್ಷೇತ್ರಕ್ಕೆ ಜೆಡಿಎಸ್ ಅಭ್ಯರ್ಥಿ ಇನ್ನೂ ಅಂತಿಮವಾಗದೇ ಇರುವ ಈ ಸಂದರ್ಭವನ್ನು ದುರುಪಯೋಗ ಮಾಡಿಕೊಂಡು ಸಿ.ಪಿ ಯೋಗೇಶ್ವರ್, ಜೆಡಿಎಸ್ ಪಕ್ಷವನ್ನು ನೈತಿಕವಾಗಿ ಕುಗ್ಗಿಸಲು, ದುರ್ಬಲಗೊಳಿಸಲು ಜೆಡಿಎಸ್ ಪಕ್ಷಕ್ಕೆ 30 ಕೋಟಿ ರೂಪಾಯಿ ನೀಡುವ ಅಪಪ್ರಚಾರ ಆರಂಭಿಸಿದ್ದರು ಎಂದು ಎಂ.ಸಿ.ಅಶ್ವಥ್ ಹೇಳಿದ್ದಾರೆ.
ಕುಮಾರಸ್ವಾಮಿ ಅವರು ನನ್ನ ಮೇಲೆ ಆರೋಪ ಮಾಡುತ್ತಾರೆ. 'ಮೂವತ್ತು ಕೋಟಿ ಕೊಡ್ತೀನಿ, ನನ್ನ ವಿರುದ್ಧ ಡಮ್ಮಿ ಕ್ಯಾಂಡಿಡೇಟ್ ಹಾಕಿ' ಎಂದು ನಾನು ಅವರಲ್ಲಿ ಮನವಿ ಮಾಡಿದ್ದೇನೆ ಅಂತಾ. ಇದು ಶುದ್ಧ ಸುಳ್ಳು. ನಾನೇಕೆ ಕುಮಾರಸ್ವಾಮಿಗೆ ಹಣಕೊಡಲಿ? ಈ ಆರೋಪವನ್ನು ದಾಖಲೆ ಸಮೇತವಾಗಿ ಸಾಬೀತುಪಡಿಸಲಿ ಎಂದು ಯೋಗೇಶ್ವರ್ ಚಾಲೆಂಜ್ ಮಾಡಿದ್ದರು. ಯೋಗೇಶ್ವರ್ ಅವರ ಈ ಅಪಪ್ರಚಾರಕ್ಕೆ ತಕ್ಕ ಉತ್ತರ ಕೊಡಲು ಮತ್ತು ಚನ್ನಪಟ್ಟಣದ ಮುಖಂಡರ ಒತ್ತಾಯದ ಮೇರೆಗೆ ತಾವೇ ಸ್ಪರ್ಧಿಸುವುದಾಗಿ ಕುಮಾರಸ್ವಾಮಿ ಘೋಷಿಸಿದರು. ನಂತರ ತಾಲೂಕಿನಲ್ಲಿ ಬೃಹತ್ ಸಮಾವೇಶ ಮಾಡಿ ತಮ್ಮ ಬಲ ಏನು, ತಾಲೂಕಿನ ಜನ ತಮ್ಮ ಮೇಲೆ ಇಟ್ಟ ವಿಶ್ವಾಸವೇನು ಎಂಬುದನ್ನು ಕುಮಾರಸ್ವಾಮಿ ತೋರಿಸಿಕೊಟ್ಟಿದ್ದಾರೆಂದು ಜೆಡಿಎಸ್ ಮುಖಂಡರು ತಿರುಗೇಟು ನೀಡಿದ್ದಾರೆ. ಕುಮಾರಸ್ವಾಮಿ ಅವರ ವಿರಾಟ್ ದರ್ಶನ ಪಡೆದ ಯೋಗೀಶ್ವರ್ ಈಗ ಕಂಗಾಲಾಗಿದ್ದಾರೆ. ಸೋಲಿನ ಮುನ್ಸೂಚನೆ ಅರಿತು ಕಂಗೆಟ್ಟಿದ್ದಾರೆ. ಹತಾಶರಾಗಿರುವ ಅವರು ಈಗ ತಮ್ಮ ಅಪಪ್ರಚಾರಕ್ಕೆ ಜೆಡಿಎಸ್ ಮುಖಂಡರನ್ನು ಹೊಣೆಗಾರರನ್ನಾಗಿಸಲು ಹೊರಟಿದ್ದಾರೆ. ಮೂವತ್ತು ಕೋಟಿಯ ಅಪಪ್ರಚಾರವೇ ಸಿ.ಪಿ.ಯೋಗೇಶ್ವರ್ ಗೆ ಮುಳುವಾಗಿದೆ ಎಂದು ಜೆಡಿಎಸ್ ಮುಖಂಡ ಅಶ್ವಥ್, ಯೋಗೇಶ್ವರ್ ಅವರಿಗೆ ತಿರುಗೇಟು ನೀಡಿದ್ದಾರೆ.
Comments