ಏಳು ಊರಿನ ಮುಖಂಡರಿಂದ ಮುತ್ಯಾಲಮ್ಮ ಜಾತ್ರಾ ಮಹೋತ್ಸವ ಬಹಿಷ್ಕಾರ
ಮುತ್ಯಾಲಮ್ಮ ಜಾತ್ರಾ ಮಹೋತ್ಸವ ಸಂಪ್ರದಾಯ ಬದ್ಧವಾಗಿಲ್ಲ ಆದ್ದರಿಂದ 7 ಊರಿನ ಜನರಿಂದ ಜಾತ್ರೆಯನ್ನು ಬಹಿಷ್ಕರಿಸಲಾಗುತ್ತಿದೆ ಎಂದು ದರ್ಗಾ ಜೋಗಹಳ್ಳಿ ಗ್ರಾ.ಪಂ. ಅಧ್ಯಕ್ಷ ನಾಗೇಶ್ ಹೇಳಿದರು. ಮುತ್ಯಾಲಮ್ಮ ಸೇವಾ ಸಮಿತಿ ಮಾಂಗಲ್ಯ ಕಲ್ಯಾಣ ಮಂಟಪದಲ್ಲಿ ಕರೆದಿದ್ದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ, ಇದು ಸಾರ್ವಜನಿಕವಾದ ಕಾರ್ಯಕ್ರಮ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕು, ಆದರೆ ದೇವಸ್ಥಾನದ ಧರ್ಮದರ್ಶಿ ನಾಗರಾಜ್ ಯಾರಿಗೂ ಹೇಳದೆ ದಿನಾಂಕ ಗೊತ್ತುಪಡಿಸಿ ಕರಪತ್ರ ಮುದ್ರಿಸಿ ಹಂಚಿದ್ದಾರೆ, ಜಾತ್ರಾ ಮಹೋತ್ಸವವನ್ನು ತಮ್ಮ ವೈಯುಕ್ತಿಕ ಕಾರ್ಯಕ್ರಮದಂತೆ ಮಾಡುತ್ತಿದ್ದಾರೆ, ಆದ್ದರಿಂದ ಈ ಜಾತ್ರೆಯಲ್ಲಿ 7 ಊರಿನ ಜನರು ಭಾಗವಹಿಸದಿರಲು ತೀರ್ಮಾನಿಸಲಾಗಿದೆ ಎಂದು ಹೇಳಿದರು. ಚುನಾವಣೆ ನೀತಿ ಸಂಹಿತೆ ಮುಗಿದ ನಂತರ ತಲತಲಾಂತರದಿಂದ ನಡೆದುಕೊಂಡು ಬಂದಿರುವ ಸಂಪ್ರದಾಯದಂತೆ ಏಳು ಊರಿನ ಪ್ರಮುಖರು ಸಭೆ ಸೇರಿ ದಿನಾಂಕ ಗೊತ್ತುಮಾಡಿ ಜಾತ್ರೆ ನಡೆಸಲಾಗುವುದು ಎಂದರು. ದೇವಸ್ಥಾನದ ಕಾರ್ಯಗಳಲ್ಲಿ ಜಾತಿ ಮತ ಬೇಧಗಳಿಲ್ಲದೆ ಜನ ಸಹಕಾರವನ್ನು ನೀಡಿದ್ದು ಆದರೆ ಇಂದು ಜಾತ್ರೆಯನ್ನು ಗೊತ್ತುಮಾಡುವಲ್ಲಿ ಏಕಾಏಕಿ ತೀರ್ಮಾನ ತೆಗೆದುಕೊಳ್ಳಲಾಗಿದೆ, ಆದ್ದರಿಂದ ಇದನ್ನು ನಾವೆಲ್ಲರೂ ಒಗ್ಗಟ್ಟಾಗಿ ಬಹಿಷ್ಕರಿಸಲು ತೀರ್ಮಾನಮಾಡಿದ್ದೇವೆ ಎಂದು ಮುಖಂಡರಾದ ಹನುಮಂತರಾವ್ ತಿಳಿಸಿದರು, ಸಭೆಯಲ್ಲಿ 7ಊರಿನ ಮುಖಂಡರು ಭಾಗವಹಿಸಿದ್ದರು.
Comments