ಸಿದ್ದರಾಮಯ್ಯ ನವರ ಹೇಳಿಕೆಗೆ ತಿರುಗೇಟು ಕೊಟ್ಟ ಎಚ್ ಡಿಕೆ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಶ ಎಚ್.ಡಿ. ಕುಮಾರಸ್ವಾಮಿ ಅವರು, ರಾಜ್ಯದ ವಿಧಾನಸಭೆ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ ತೊಲಗಿಸಬೇಕೆಂಬ ಭಾವನೆಯನ್ನು ನಾಡಿನ ಜನತೆ ಹೊಂದಿದ್ದಾರೆ ಎಂದು ತಿಳಿಸಿದರು. ರಾಜ್ಯಾದ್ಯಂತ ನಾನು ಕೈಗೊಳ್ಳುತ್ತಿರುವ ಪ್ರವಾಸದಿಂದಾಗಿ ಅಂಡರ್ ಕರೆಂಟ್ ಪಾಸಾಗುತ್ತಿರುವ ವಾತಾವರಣ ನಿರ್ಮಾಣವಾಗಿದ್ದು, ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಸಂಕಷ್ಟ ಎದುರಾಗಿದೆ ಎಂದು ತಿಳಿಸಿದರು. ಕುಮಾರಸ್ವಾಮಿ ಭ್ರಮಾ ಲೋಕದಲ್ಲಿದ್ದಾರೆ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಅವರು, ಜನತಾ ಲೋಕದಲ್ಲಿರುವುದಾಗಿ ಹೇಳಿದರು.
ಆಣೆ ಹಾಕುವುದಾದರೆ ಸಿದ್ದರಾಮಯ್ಯನವರು ಅವರ ಅಪ್ಪನ ಮೇಲೆ ಹಾಕಿಕೊಳ್ಳಲಿ ಎಂದು ಮಾಜಿ ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ಸಿದ್ದರಾಮಯ್ಯನವರಿಗೆ ಅಪ್ಪ ಇದ್ದಾರೋ ಇಲ್ವೋ ಎಂದು ಪ್ರಶ್ನಿಸಿದ ಅವರು, ನಮ್ಮ ಅಪ್ಪನ ಮೇಲೆ ಏನಕ್ಕೆ ಆಣೆ ಹಾಕುತ್ತಾರೆ? ಸಿಎಂ ಇದೇ ಮೊದಲ ಬಾರಿ ಅಲ್ಲ ಬಹಳಷ್ಟು ಬಾರಿ ಹೇಳಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು. ಕಳೆದ ಎರಡೂವರೆ ತಿಂಗಳಿನಿಂದಲೂ ರಾಜ್ಯಾದ್ಯಂತ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದು, ಎಲ್ಲಾ ಕಡೆ ಜನರ ಭಾವನೆ ಜೆಡಿಎಸ್ ಪರವಾಗಿರುವುದನ್ನು ಅರಿತಿದ್ದೇನೆ. ಈ ಬಾರಿ ಬಿಜೆಪಿ ಮತ್ತು ಕಾಂಗ್ರೆಸ್ ಅನ್ನು ತೊರೆಯಬೇಕೆಂಬ ಭಾವನೆ ಜನರಿಂದ ವ್ಯಕ್ತವಾಗುತ್ತಿದೆ ಎಂದರು. ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪರಸ್ಪರ ಆರೋಪ-ಪ್ರತ್ಯಾರೋಪಗಳಲ್ಲಿ ಕಾಲಹರಣ ಮಾಡುತ್ತಿದ್ದಾರೆ. ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುತ್ತಿಲ್ಲ. ಆದರೆ, ನಮ್ಮ ಪಕ್ಷದ ಕಾರ್ಯಕರ್ತರು, ಮುಖಂಡರು ಸಮಸ್ಯೆಗಳ ಆಧಾರದ ಮೇಲೆ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ ಎಂದು ತಿಳಿಸಿದರು. ಸಿಂಗಾಪುರ ಸೇರಿದಂತೆ ದೇಶ-ವಿದೇಶಗಳಲ್ಲಿ ಮಾಡಿರುವ ಬೇನಾಮಿ ಆಸ್ತಿ ಆರೋಪದ ಬಗ್ಗೆ ಕಿಡಿಕಾರಿದ ಕುಮಾರಸ್ವಾಮಿ, ಈ ಸಂಬಂಧ ತನಿಖೆ ಮಾಡಲಿ ಎಂದು ಹೇಳಿದರು. ಬಿಜೆಪಿಯವರೇ ಆದ ಪ್ರಧಾನಿ ನರೇಂದ್ರ ಮೋದಿ ಅವರು, ನಾನು ಎಲ್ಲೆಲ್ಲಿ ಆಸ್ತಿ ಮಾಡಿದ್ದೇನೆ ಎಂಬ ಬಗ್ಗೆ ತನಿಖೆ ಮಾಡಿಸಲಿ. ಇಡಿ, ಐಟಿ ಸೇರಿದಂತೆ ಯಾವ ಯಾವ ಇಲಾಖೆಗಳಿವೆಯೋ ಅವುಗಳಿಂದ ತನಿಖೆ ಮಾಡಿಸಲಿ ಎಂದು ಹೇಳಿದರು. ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲ್ಲಿಸಬೇಕಾಗಿರುವುದು ನನ್ನ ಜವಾಬ್ದಾರಿಯೇ ಹೊರತು ಮುಖ್ಯಮಂತ್ರಿಯನ್ನು ಸೋಲಿಸಲು ಹೋಗುತ್ತಿಲ್ಲ. ಪಕ್ಷದ ಅಭ್ಯರ್ಥಿ ಗೆಲುವಿಗಾಗಿ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಹೋಗುತ್ತಿರುವುದಾಗಿ ಹೇಳಿದ ಕುಮಾರಸ್ವಾಮಿ, ಆ ಕ್ಷೇತ್ರದಲ್ಲಿ ಜನತೆ ಸಿದ್ದರಾಮಯ್ಯ ಅವರಿಗೆ ಈ ಬಾರಿಯ ಚುನಾವಣೆಯಲ್ಲಿ ಪಾಠ ಕಲಿಸುತ್ತಾರೆ ಎಂದರು.
Comments