ದೊಡ್ಡಬಳ್ಳಾಪುರದ ಜನ ಭಿಕ್ಷುಕರು- ಶಾಸಕ ವೆಂಕಟರಮಣಯ್ಯ ಹೇಳಿಕೆಗೆ ಜೆಡಿಎಸ್ ಮುಖಂಡರ ಅಸಮಾಧಾನ





ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜೆಡಿಎಸ್ ನಗರ ಘಟಕ ಅಧ್ಯಕ್ಷ ವಿ.ಎಸ್.ರವಿಕುಮಾರ್ 2013ಕ್ಕೂ ಮುಂಚೆ ಕುಡಿಯುವ ನೀರಿಗಾಗಿ ಜನ ಭಿಕ್ಷೆ ಬೇಡುತ್ತಿದ್ದರು ಎಂದು ಹೇಳಿರುವುದು ಖಂಡನೀಯ, ಈ ಕೂಡಲೇ ಶಾಸಕರು ನಗರದ ಜನರ ಬಗ್ಗೆ ಹಗುರವಾಗಿ ಮಾತನಾಡುವುದು ಬಿಟ್ಟು ತಮ್ಮ ಮಾತಿಗೆ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು. ಜೆಡಿಎಸ್ ಹಿರಿಯ ಮುಖಂಡ ಜಿ.ಸತ್ಯನಾರಾಯಣ್ ಮಾತನಾಡಿ ಶಾಸಕರು 2000 ಕೋಟಿ ಕಾಮಗಾರಿಯ ಲೆಕ್ಕ ನೀಡುತ್ತಾರೆ ಇಷ್ಟೊಂದು ಮೊತ್ತದ ಕೆಲಸ ಆಗಿದ್ದರೆ ದೊಡ್ಡಬಳ್ಳಾಪುರ ಸಿಂಗಪುರ ಆಗುತ್ತಿತ್ತು ಆದರೆ ಮಂಗಾಪುರ ಆಗಿದೆ ಎಂದು ವ್ಯಂಗವಾಡಿದರು.
ಜೆಡಿಎಸ್ ತಾಲ್ಲೂಕು ಕಾರ್ಯಾಧ್ಯಕ್ಷ ಆರ್. ಕೆಂಪರಾಜು ಮಾತನಾಡಿ ಮತದಾರರ ಮನೆ ಬಾಗಿಲಿಗೆ ಹೋಗಿ ಮತ ಭಿಕ್ಷೆ ಬೇಡಿದ ಶಾಸಕರು ಈಗ ಜನರನ್ನು ಭಿಕ್ಷುಕರು ಎಂದು ಹೇಳುತ್ತಿದ್ದಾರೆ, ನಗರಸಭೆ ವ್ಯಾಪ್ತಿಯಲ್ಲಿ ನಿರ್ಮಿಸಿರುವ ಆಶ್ರಯ ಮನೆಗಳಿಗೆ ಹಕ್ಕು ಪತ್ರ ನೀಡಿದ್ದೇ ತಮ್ಮ ದೊಡ್ಡ ಸಾಧನೆ ಎಂದು ಹೇಳಿಕೊಳ್ಳುತ್ತಿದ್ದಾರೆ ಎಂದು ಹೇಳಿದರು. ನಗರಸಭೆ ಸದಸ್ಯ ಶಿವಕುಮಾರ್ ಮಾತನಾಡಿ, ನಗರಸಭೆಗೆ ಸಂಸತ್ ಸದಸ್ಯರ ಹಾಗೂ ಶಾಸಕರ ನಿಧಿಯಿಂದ ಒಂದು ಪೈಸೆ ಹಣವೂ ಬಂದಿಲ್ಲ, ಅದಕ್ಕೆ ದಾಖಲೆ ಇದೆ, ಆದರೆ ನಗರಸಭೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಎಲ್ಲಾ ಕೆಲಸಗಳೂ ನಮ್ಮವೇ ಎಂದು ಹೇಳಿಕೊಳ್ಳುತ್ತಿದ್ದಾರೆ ಎಂದು ದೂರಿದರು. ನಗರಸಭೆ ಸದಸ್ಯ ಪಿ.ಸಿ.ಲಕ್ಷ್ಮೀನಾರಾಯಣ್, ಯುವ ಘಟಕ ಜಿಲ್ಲಾಧ್ಯಕ್ಷ ಸುನಿಲ್ ಕುಮಾರ್, ತಾಲ್ಲೂಕು ಅಧ್ಯಕ್ಷ ಮಂಜುನಾಥ್, ದೇವರಾಜಮ್ಮ, ಶಾಂತಮ್ಮ ಹಾಜರಿದ್ದರು.
Comments