ಕಾಂಗ್ರೆಸ್ ನ ಮಾಜಿ ಸಂಸದ ಜೆಡಿಎಸ್‌ಗೆ ಸೇರ್ಪಡೆ...!!
ಹಳೇ ಮೈಸೂರು ಭಾಗದಲ್ಲಿ ಭರ್ಜರಿಯಾಗಿ ಚುನಾವಣೆ ಪ್ರಚಾರ ನಡೆಸುತ್ತಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಶಿರಾದಲ್ಲೂ ಪಕ್ಷದ ಶಕ್ತಿಪ್ರದರ್ಶನ ನಡೆಸಿದರು.
ಶಿರಾ ಪಟ್ಟಣಕ್ಕೆ ಹೆಲಿಕಾಪ್ಟರ್‌ನಲ್ಲಿ ಆಗಮಿಸಿದ ಅವರು, ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸುಮಾರು 2 ಗಂಟೆಗೂ ಅಧಿಕ ಕಾಲ ರೋಡ್ ಶೋ ನಡೆಸಿದರು. ಕ್ರೇನ್ ಮೂಲಕ ಬೃಹತ್ ಹಾರ ಹಾಕಿ ಅವರನ್ನು ಸ್ವಾಗತಿಸಿದ ಜೆಡಿಎಸ್ ಕಾರ್ಯಕರ್ತರು ರಸ್ತೆಪಕ್ಕದಲ್ಲಿ ಬುಲ್ಡೋಜರ್‌ಗಳನ್ನು ಸಾಲು ನಿಲ್ಲಿಸಿ ಹೂವಿನ ಮಳೆ ಹರಿಸಿದರು. ಮುಸ್ಲಿಮ್ ಸಮುದಾಯದ ಮುಖಂಡರು ಕುಮಾರಸ್ವಾಮಿಗೆ ಬೃಹತ್ ಹೂವಿನ ಹಾರ ಸಮರ್ಪಣೆ ಮಾಡಿದರು. ಹಾಲು ಮತಸ್ಥ ಸಮುದಾಯದ ಮುಖಂಡರು ಕಂಬಳಿ ಹೊದಿಸಿ ಕುರಿಮರಿ ಮತ್ತು ಬೆಳ್ಳಿಖಡ್ಗವನ್ನು ಕಾಣಿಕೆಯಾಗಿ ನೀಡಿದರು. ಪಟ್ಟಣದಲ್ಲಿ ನಡೆದ ಜೆಡಿಎಸ್ ವಿಕಾಸ ಪರ್ವ ಉದ್ಘಾಟಿಸಿ ಮಾತನಾಡಿದ ಎಚ್.ಡಿ.ಕುಮಾರಸ್ವಾಮಿ ಅವರು, ನಿರುದ್ಯೋಗಿ ಹೆಣ್ಣು ಮಕ್ಕಳು ಹಾಗೂ ಗಂಡು ಮಕ್ಕಳಿಗೆ ಸಸಿ ನೆಟ್ಟು ಬೆಳೆಸುವ ಕೆಲಸ ನೀಡಿ ಪ್ರತಿ ತಿಂಗಳು .5000 ಸಂಬಳ ನೀಡಲಾಗುವುದು ಎಂದು ಹೊಸ ಭರವಸೆ ನೀಡಿದರು. ಕಾಂಗ್ರೆಸ್‌ನಿಂದ ಮಾಜಿ ಸಂಸದ ಸಿ.ಪಿ.ಮೂಡಲಗಿರಿಯಪ್ಪ ಸೇರಿದಂತೆ ನೂರಾರು ಮಂದಿ ಜೆಡಿಎಸ್‌ಗೆ ಸೇರ್ಪಡೆಯಾದರು. ಸಮಾವೇಶದಲ್ಲಿ ಸುಮಾರು 30 ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು.
Comments