ಕಾವೇರಿಗಾಗಿ ಸಂಸದ ಸ್ಥಾನಕ್ಕೆ ರಾಜೀನಾಮೆ ಕೊಡಲು ಮುಂದಾದ ಮಾಜಿ ಪ್ರಧಾನಿ ದೇವೇಗೌಡ್ರು
ಕಾವೇರಿ ವಿಚಾರವಾಗಿ ಪ್ರಾಣತ್ಯಾಗ ಮಾಡುತ್ತೇವೆ ಅಂತ ತಮಿಳುನಾಡು ಸಂಸದರು ಲೋಕಸಭೆಯಲ್ಲೇ ಎಚ್ಚರಿಕೆ ಕೊಡ್ತಾರೆ. ಈಗ ನೋಡಿದರೆ ತಮಿಳುನಾಡಿನ ಸಿಎಂ ಮತ್ತು ಸಚಿವ ಸಂಪುಟ ಸದಸ್ಯರು ಕಾವೇರಿ ವಿಷಯವಾಗಿ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾರೆ. ಇದು ಕನ್ನಡಿಗರನ್ನು ಕೆರಳಿಸುವ ಪ್ರಯತ್ನವೇ? ನಮಗೇನು ಹೀಗೆ ಹೋರಾಟ ಮಾಡಲು ಬರುವುದಿಲ್ಲವೇ? ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತಮಿಳುನಾಡು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರವೇನಾದರೂ ತಮಿಳುನಾಡು ಸರ್ಕಾರದ ಒತ್ತಾಯಕ್ಕೆ ಕಟ್ಟುಬಿದ್ದು ಕಾವೇರಿ ಜಲ ನಿರ್ವಹಣಾ ಮಂಡಳಿ ರಚಿಸಿದ್ದೇ ಆದಲ್ಲಿ, ನಾನು ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದ್ದಾರೆ.ಕಾವೇರಿ ಜಲ ನಿರ್ವಹಣ ಮಂಡಳಿ ನಿರ್ಮಾಣವಾದರೆ ನಾನು ರಾಜೀನಾಮೆ ನೀಡಲು ಸಿದ್ಧ. ಬಿಜೆಪಿ ಸಂಸದರು ರಾಜೀನಾಮೆ ನೀಡಲು ಸಿದ್ಧರೇ? ಎಂದು ಅವರು ಪ್ರಶ್ನಿಸಿದ್ದಾರೆ.ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಫೆ.16 ರಂದು ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪಿನಲ್ಲಿ, ತೀರ್ಪು ಬಂದ ಆರುವಾರಗಳ ಒಳಗೆ ಕಾವೇರಿ ಜಲ ನಿರ್ವಹಣ ಮಂಡಳಿ ರಚಿಸುವಂತೆ ಆದೇಶ ನೀಡಿತ್ತು. ಅಲ್ಲದೆ, ಜಲ ನಿರ್ವಹಣ ಮಂಡಳಿ ರಚಿಸಬೇಕೋ ಬೇಡವೋ ಎಂಬುದು ಸಹ ಕೇಂದ್ರ ಸರ್ಕಾರಕ್ಕೆ ಬಿಟ್ಟ ವಿಚಾರ ಎಂದು ಅದು ಹೇಳಿತ್ತು. ಆದರೆ ಇದುವರೆಗೂ ಕಾವೇರಿ ನಿರ್ವಹಣ ಮಂಡಳಿಯನ್ನು ಕುರಿತಂತೆ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟಿಗೆ ಯಾವುದೇ ಮಾಹಿತಿ ನೀಡಿಲ್ಲ. ಈ ಮೂಲಕ ಕೇಂದ್ರ ಸರ್ಕಾರ ನ್ಯಾಯಾಂಗ ನಿಂದನೆ ಮಾಡಿದೆ ಎಂದು ತಮಿಳುನಾಡು ದೂರಿದೆ. ಈ ಕುರಿತು ಈಗಾಗಲೇ ತಮಿಳುನಾಡಿನ ಎಐಎಡಿಎಂಕೆ ಮತ್ತು ಡಿಎಂಕೆ ಸಂಸದರು, ಶಾಸಕರು, ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ. ಇವರೆಲ್ಲರ ಒತ್ತಡಲ್ಲೆ ಕೇಂದ್ರ ಸರ್ಕಾರ ಮಣಿದದ್ದೇ ಆದಲ್ಲಿ ಜಲಮಂಡಲಿ ನಿರ್ಮಾಣವಾಗಿ ಕರ್ನಾಟಕಕ್ಕೆ ನಷ್ಟವಾಗಲಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ. ಅತ್ತ ತಮಿಳುನಾಡು ಜಲಮಂಡಳಿ ನಿರ್ಮಾಣಕ್ಕೆ ಆಗ್ರಹಿಸಿ ತಮಿಳುನಾಡಿನ ಸಂಸದರು ಉಪವಾಸ ಸತ್ಯಾಗ್ರಹ, ಆತ್ಮಹತ್ಯೆ ಬೆದರಿಕೆ ಸೇರಿದಂತೆ ತರಹೇವಾರಿ ಪ್ರತಿಭಟನೆ ನಡೆಸುತ್ತಿರುವುದನ್ನು ಇಲ್ಲಿ ಸ್ಮರಿಸಬಹುದು.
Comments