ಸಿಎಂ ಸಿದ್ದರಾಮಯ್ಯಗೆ ತವರೂರಲ್ಲೇ ಬಿಗ್ ಶಾಕ್ ಕೊಟ್ಟ ಜೆಡಿಎಸ್..!!
ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜ್ಯದಲ್ಲಿ ರಾಜಕೀಯ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿಎಂ ಸಿದ್ದರಾಮಯ್ಯ ಸೋಲಿಗೆ ತಂತ್ರ ರೂಪಿಸುತ್ತಿರುವ ಜೆಡಿಎಸ್ 25ಜನ ಕಾಂಗ್ರೆಸ್ ಕಾರ್ಯಕರ್ತರನ್ನು ಜೆಡಿಎಸ್ಗೆ ಸೇರ್ಪಡೆ ಮಾಡುವ ಮೂಲಕ ಸಿಎಂಗೆ ದೊಡ್ಡ ಪೆಟ್ಟು ನೀಡಿದೆ.
ಕ್ಷೇತ್ರದ ಸ್ಥಳೀಯ ಪ್ರಭಾವಿಗಳು, ಸಿದ್ದರಾಮಯ್ಯ ಅವರ ಪರಮ ಆಪ್ತರು ಎನಿಸಿಕೊಂಡಿದ್ದ ದಿ.ಕೆಂಪೀರೇಗೌಡ ಅವರ ಪುತ್ರ ಉಮಾಶಂಕರ್ ಸೇರಿದಂತೆ 25ಕ್ಕೂ ಹೆಚ್ಚು ಕಾಂಗ್ರೆಸ್ ಮುಖಂಡರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವಲ್ಲಿ ಜೆಡಿಎಸ್ ಅಭ್ಯರ್ಥಿ ಜಿ.ಟಿ ದೇವೇಗೌಡ ಅವರು ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ. ನಗರದ ಖಾಸಗಿ ಹೊಟೇಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು, ಪಕ್ಷ ಸೇರ್ಪಡೆ ಬಗ್ಗೆ ಮಾಹಿತಿ ಬಹಿರಂಗ ಪಡಿಸಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಎರಡು ದಿನ ಪ್ರಚಾರ ನಡೆಸಿ ಹೋದ ಸಿಎಂ ಸೋಲಿಸಲು ಜೆಡಿಎಸ್ ತಯಾರಿ ನಡೆಸಿದ್ದು, ಪಕ್ಷಾಂತರ ನಡೆಸುವ ಮೂಲಕ ಸಿದ್ದರಾಮಯ್ಯಗೆ ಬಿಗ್ ಶಾಕ್ ನೀಡಿದೆ.
ಚಾಮುಂಡೇಶ್ವರಿ, ವರುಣಾ ಕ್ಷೇತ್ರದಿಂದ ಮತದಾರರು ಅಪ್ಪ-ಮಗನನ್ನು ಮನೆಗೆ ಕಳುಹಿಸಲಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು. ಜನರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಚಾಮುಂಡೇಶ್ವರಿ ಕ್ಷೇತ್ರದಿಂದಲೂ, ಅವರ ಪುತ್ರ ಯತೀಂದ್ರನನ್ನು ವರುಣಾದಿಂದ ಮನೆಗೆ ಕಳುಹಿಸಲಿದ್ದಾರೆ ಎಂದರು. ಚಾಮುಂಡೇಶ್ವರಿ ಕ್ಷೇತ್ರ ಬಿಟ್ಟು ಹೋಗಿದ್ದ ಸಿದ್ದರಾಮಯ್ಯ ವರುಣಾಗೆ ಪಲಾಯನ ಮಾಡಿದ್ದರು. ಆದರೆ ಇದೀಗ ಮತ್ತೆ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಬಂದಿದ್ದಾರೆಂದು ವ್ಯಂಗ್ಯವಾಡಿದರು. ಮಗನಿಗೆ ರಾಜಕೀಯ ಭವಿಷ್ಯ ರೂಪಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ವರುಣಾದಿಂದ ಚಾಮುಂಡೇಶ್ವರಿಗೆ ಬಂದಿದ್ದಾರೆಂದು ಟೀಕಿಸಿದರು. ಈ ಕ್ಷೇತ್ರದಲ್ಲಿ ಸಿದ್ಧರಾಮಯ್ಯ ಅವರು ಜಿಲ್ಲಾಧಿಕಾರಿಗಳ ಮೇಲೆ ಹಲ್ಲೆ ಮಾಡಿದ ಮರಿಗೌಡನನ್ನು ಬಾಡಿಗಾರ್ಡ್‍ನನ್ನಾಗಿ ಇಟ್ಟುಕೊಂಡಿದ್ದಾರೆಂದು ದೂರಿದರು.
ಒಕ್ಕಲಿಗ ಸಮಾಜದ ಕೆಲ ಮುಖಂಡರನ್ನು ನಮ್ಮ ವಿರುದ್ಧ ಬಿಟ್ಟು ಒಡೆದಾಳುವ ನೀತಿ ಅನುಸರಿಸುತ್ತಿದ್ದಾರೆಂದು ಮುಖ್ಯಮಂತ್ರಿ ವಿರುದ್ಧ ಎಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದರು. ನಾನಾಗಲಿ, ಜಿ.ಟಿ.ದೇವೇಗೌಡರಾಗಲಿ ಸಿದ್ದರಾಮಯ್ಯ ಅವರನ್ನು ಸೋಲಿಸುತ್ತೇವೆಂದು ಎಲ್ಲೂ ಹೇಳಿಲ್ಲ. ಜನರೇ ಅವರನ್ನು ಮನೆಗೆ ಕಳುಹಿಸುತ್ತಾರೆಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಜಿ.ಟಿ ದೇವೇಗೌಡ ಅವರ ಮೇಲೆ ಎಸಿಬಿ ಬಿಟ್ಟು ಗದಾಪ್ರಹಾರ ಮಾಡಿಸಿದ್ದರು. ಆಗ ಮಾತ್ರ ಸಿದ್ದು ವಿರುದ್ದ ಮಾತನಾಡಿದ್ದೆ ಎಂದು ಮತ್ತೊಂದು ಪ್ರಶ್ನೆಗೆ ಉತ್ತರಿಸಿದರು. ನಂಜನಗೂಡು-ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ರಾಜಕೀಯ ಕಾರಣಗಳಿಂದಾಗಿ ನಾವು ಅಭ್ಯರ್ಥಿಯನ್ನು ಕಣಕ್ಕಿಳಿಸಿರಲಿಲ್ಲ ಎಂದರು. ಉಪಚುನಾವಣೆಯಲ್ಲಿ ಗೆದ್ದಿರುವುದು ಸಿಎಂ ಅವರ ಸರ್ಕಾರದ ಆಡಳಿತದಿಂದಲ್ಲ , ವಾಮಮಾರ್ಗದ ಮೂಲಕ ಅವರು ಜಯ ಗಳಿಸಿದ್ದಾರೆ ಎಂದು ಹೇಳಿದರು. ಕಾಂಗ್ರೆಸ್ ಪಕ್ಷದ ಹಲವು ಮಂದಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದರು.
Comments