ಬಿಜೆಪಿಯ ಮತ್ತೊಂದು ವಿಕೆಟ್ ಜೆಡಿಎಸ್ ತೆಕ್ಕೆಗೆ..!!

ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜಕೀಯದ ಪ್ರಚವಿತ ವಿದ್ಯಮಾನಗಳಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತಾ ಬರುತ್ತಿವೆ. ಅನ್ಯ ಪಕ್ಷಗಳ ನಾಯಕರು ಜೆಡಿಎಸ್ ನತ್ತ ಮುಖ ಮಾಡುತ್ತಿದ್ದಾರೆ. ಇನ್ನು ಹಲವು ನಾಯಕರು ಜೆಡಿಎಸ್ ಸೀರ್ಪಡೆಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಜೆಡಿಎಸ್ ಘೋಷಿತ ಅಭ್ಯರ್ಥಿ ಎ.ಎಸ್. ಪಾಟೀಲನಡಹಳ್ಳಿ ಬಿಜೆಪಿ ಸೇರ್ಪಡೆಗೆ ಜೆಡಿಎಸ್ ಟಾಂಗ್ ಕೊಡಲು ಮುಂದಾಗಿದೆ.
ದೇವರ ಹಿಪ್ಪರಗಿ ಬಿಜೆಪಿ ಟಿಕೆಟ್ ಆಕಾಂಕ್ಷಿ ರಾಜುಗೌಡ ಪಾಟೀಲ ಕುದರಿ ಸಾಲವಾಡಗಿ ಜೆಡಿಎಸ್ ನತ್ತ ಚಿತ್ತ ಹರಿಸಿದ್ದು, ಈಗಾಗಲೇ ತಯಾರಿ ಆರಂಭಿಸಿದ್ದಾರೆ. ಇದಕ್ಕೆ ಪೂರ್ವಭಾವಿಯಾಗಿ ರಾಜುಗೌಡ ಪಾಟಿಲ ಕುದರಿ ಸಾಲವಾಡಗು ತಮ್ಮ ಬೆಂಬಲಿಗರ ಜೊತೆ ತುರ್ತು ಸಭೆ ನಡೆಸಿದ್ದಾರೆ. ಇವರ ಬೆಂಬಲಿಗರು ಕೂಡ ರಾಜುಗೌಡ ಪಾಟೀಲ ಕುದರಿ ಸಾಲವಾಡಗಿ ಅವರಿಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದು, ತೆನೆಯ ಹೊರೆ ಹೊರಲು ಸಮ್ಮತಿ ಸೂಚಿಸಿದ್ದಾರೆ. ಈ ಹಿಂದೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ಡಿ. ಕುಮಾರಸ್ವಾಮಿ ಪಕ್ಷ ಸೇರುವಂತೆ ಆಫರ್ ನೀಡಿದ್ದರು. ಆಗ ಬೆಂಬಲಿಗರೊಂದಿಗೆ ಚರ್ಚಿಸಿ ನಿರ್ಧಾರ ಪ್ರಕಟಿಸುವುದಾಗಿ ರಾಜುಗೌಡ ಪಾಟೀಲ ಕುದರಿ ಸಾಲವಾಡಗಿ ತಿಳಿಸಿದ್ದರು. ಈಗ ಅವರ ಬೆಂಬಲಿಗರು ಜೆಡಿಎಸ್ ಸೇರ್ಪಡೆಗೆ ಗ್ರೀನ್ ಸಿಗ್ನಲ್ ತೋರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜುಗೌಡ ಪಾಟೀಲ ಕುದರಿ ಸಾಲವಾಡಗಿ ಶೀಘ್ರದಲ್ಲಿ ಜೆಡಿಎಸ್ ಸೇರ್ಪಡೆಗೆ ಮುಹೂರ್ತ ನಿಗದಿಯಾಗಲಿದೆ. ಅಂದಹಾಗೆ, ಕಳೆದ ಬಾರಿ ಕೆಜೆಪಿ ಟಿಕೆಟ್ ನಿಂದ ಸ್ಪರ್ಧಿಸಿ ಪರಾಭವಗೊಂಡಿದ್ದ ರಾಜುಗೌಡ ಪಾಟೀಲ ಕುದರಿ ಸಾಲವಾಡಗಿ, ಈ ಬಾರಿ ಜೆಡಿಎಸ್ ನಿಂದ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ. ಏ. 8 ರಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ಡಿ. ಕುಮಾರಸ್ವಾಮಿ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಹೂವಿನ ಹಿಪ್ಪರಗಿಗೆ ಆಗಮಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ತಾವು ತಮ್ಮ ಅಪಾರ ಬೆಂಬಲಿಗರೊಂದಿಗೆ ಜೆಡಿಎಸ್ ಸೇರ್ಪಡೆಯಾಗುವುದಾಗಿ ರಾಜುಗೌಡ ಪಾಟೀಲ ಕುದರಿ ಸಾಲವಾಡಗಿ ಈ ಸಂದರ್ಭದಲ್ಲಿ ನ್ಯೂಸ್18 ಕನ್ನಡಕ್ಕೆ ತಿಳಿಸಿದರು.
Comments