ವಿಧಾನಸಭಾ ಚುನಾವಣೆ : ಈ ಎರಡು ಕ್ಷೇತ್ರದಿಂದ ಎಚ್ ಡಿ ಕೆ ಸ್ಪರ್ಧಿಸುವುದು ಖಚಿತ
ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಎರಡು ಕ್ಷೇತ್ರದಿಂದ ಸ್ಪರ್ಧಿಸಲು ತೀರ್ಮಾನಿಸಿರುವುದಾಗಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಹೇಳಿದ್ದಾರೆ.
ಹೌದು.., ವಿಧಾನಸಭೆ ಚುನಾವಣೆಯಲ್ಲಿ ರಾಮನಗರ ಹಾಗೂ ಚನ್ನಪಟ್ಟಣ ಎರಡೂ ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುವುದಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಘೋಷಿಸಿದ್ದಾರೆ. ರಾಮನಗರದಲ್ಲಿ ನಡೆದ ಜೆಡಿಎಸ್ ವಿಕಾಸ ಪರ್ವ ಸಮಾವೇಶದಲ್ಲಿ ಮಾತನಾಡಿದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು,'ರಾಮನಗರ, ಚನ್ನಪಟ್ಟಣ ಎರಡು ಕಣ್ಣಿದ್ದಂತೆ. ನಿಮ್ಮೆಲ್ಲರ ಒತ್ತಡಕ್ಕೆ ತಲೆ ಬಾಗಿ ರಾಮನಗರ, ಚನ್ನಪಟ್ಟಣ ಎರಡೂ ಕಡೆ ಎಚ್.ಡಿ. ಕುಮಾರಸ್ವಾಮಿಯವರು ಸ್ಪರ್ಧಿಸುವ ನಿರ್ಣಯ ಮಾಡಿದ್ದಾರೆ. ಚನ್ನಪಟ್ಟಣದಲ್ಲಿ ಕಾಂಗ್ರೆಸ್, ಬಿಜೆಪಿ ವಿರುದ್ಧ ಕುಮಾರಸ್ವಾಮಿಯವರು ಹೋರಾಟ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ. ರಾಮನಗರ- ಚನ್ನಪಟ್ಟಣ ನನಗೆ ಎರಡು ಕಣ್ಣುಗಳು ಇದ್ದಂತೆ. ಎರಡರಲ್ಲಿ ಒಂದಿಲ್ಲದಿದ್ದರೂ ಅಂಧನಾಗುತ್ತೇನೆ. ನಾನು ನಿಮ್ಮ ಮಡಿಲಿನಲ್ಲಿದ್ದೇನೆ. ನೀವು ಹಾಲನ್ನಾದರೂ ನೀಡಿ, ವಿಷವನ್ನಾದರೂ ಕುಡಿಸಿ ಎಂದು ಭಾವುಕರಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ನುಡಿದರು.
ರಾಮನಗರ-ಚನ್ನಪಟ್ಟಣ ಕ್ಷೇತ್ರಗಳಿಂದ ಸ್ಪರ್ಧೆ ಮಾಡುತ್ತಿದ್ದು ನನ್ನನ್ನು ಉಳಿಸಿಕೊಂಡು, ಪಕ್ಷ ಬೆಳೆಸಿದರೆ ನಿಮ್ಮ ಮನೆಯ ಕಷ್ಟಗಳಿಗೆ ಪರಿಹಾರ ಕೊಡಿಸುವ ಜವಾಬ್ದಾರಿ ನನ್ನದು ಎಂದು ಅವರು ಹೇಳಿದರು. ವಿಧಾನಸಭಾ ಚುನಾವಣೆ ನನ್ನ ಪಾಲಿಗೆ ಅಗ್ನಿ ಪರೀಕ್ಷೆಯಾಗಿದ್ದು, 120ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲವು ಸಾಧಿಸಿ ನನ್ನ ತಂದೆಯ ಪಾಲಿಗೆ ಉಡುಗೊರೆ ನೀಡಲು ಹೊರಟಿರುವುದಾಗಿ ತಿಳಿಸಿದರು.ನನ್ನ ಆರೋಗ್ಯ ಏನಾಗಿದೆ ಎಂಬುದು ಗೊತ್ತು. ವೈದ್ಯರ ಸಲಹೆಯನ್ನು ತಿರಸ್ಕರಿಸಿ ಅಗ್ನಿ ಪರೀಕ್ಷೆ ಎದುರಿಸಲು ಹೊರಟಿದ್ದೇನೆ ಎಂದರು. ನಾನು 113 ಸ್ಥಾನಗಳ ಗೆಲವಿನ ಗುರಿ ಹೊಂದಿದ್ದೇನೆ. ಪಕ್ಷದ ಅಭ್ಯರ್ಥಿಗಳು ಮತ್ತು ಮುಖಂಡರು ಸರಿಯಾಗಿ ಕೆಲಸ ಮಾಡಿದರೆ 140 ಸ್ಥಾನಗಳಲ್ಲಿಯೂ ಗೆಲವು ಸಾಧಿಸಬಹುದು ಎಂದು ಹೇಳಿದರು. ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಸುಭದ್ರವಾಗಿದ್ದು ಮೈಸೂರು ಜಿಲ್ಲೆಯಲ್ಲಿ 11 ಕ್ಷೇತ್ರದಲ್ಲಿ 8 -9 ಸ್ಥಾನ, ಮಂಡ್ಯದಲ್ಲಿ ಏಳು ಸ್ಥಾನ , ತುಮಕೂರು 11 ಕ್ಷೇತ್ರಗಳಲ್ಲಿ ಗೆಲವು ಸಾಧಿಸಲು ಪೂರಕ ವಾತಾವರಣವಿದೆ. ಬಾಗಲಕೋಟೆ, ವಿಜಯಪುರ, ಯಾದಗಿರಿ ಜಿಲ್ಲೆಯ ಜನರು ಜೆಡಿಎಸ್ ಪರ ಒಲವು ಹೊಂದಿದ್ದಾರೆ ಎಂದು ತಿಳಿಸಿದರು.
Comments