ಸಿದ್ದರಾಮಯ್ಯ ಹಾಗೂ ಜಮೀರ್ ಗೆ ಟಾಂಗ್ ಕೊಟ್ಟ ಎಚ್ ಡಿಕೆ
ಸಿಎಂ ಸಿದ್ದರಾಮಯ್ಯ ಜೆಡಿಎಸ್‌ಗೆ 25 ಸೀಟು ಬರಲ್ಲ ಅಂತ ಜನರ ದಿಕ್ಕು ತಪ್ಪಿಸುವ ಕಾರ್ಯದಲ್ಲಿದ್ದಾರೆ. ಸಿದ್ದರಾಮಯ್ಯ ಇನ್ನೊಂದು ಜನ್ಮಎತ್ತಿ ಬಂದರೂ ನಮ್ಮನ್ನ ಸೋಲಿಸಲು ಸಾಧ್ಯವಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ಸ್ಥಿತಿಯೇ ಹೀನಾಯವಾಗಿದೆ. ಮೈಸೂರಿನಲ್ಲೆ ಠಿಕಾಣಿ ಹೂಡುವ ಪರಿಸ್ಥಿತಿ ಬಂದಿದೆ. ಸಾಲಮನ್ನಾ ಮಾಡ್ತಿವಿ ಅಂತ ಸರ್ಕಾರ ರೈತರಿಗೆ ಟೋಪಿ ಹಾಕೋ ಕೆಲಸ ಮಾಡಿದೆ. ಮುಂದಿನ ಜೂನ್‌ಗೆ ಉಳಿದ ಹಣ ಕೊಡ್ತಿವಿ ಅಂತಾರೆ. ಮುಂದೆ ಹಣ ಕೊಡೊಕೆ ಇವ್ರೇ ಗೂಟ ಹೊಡ್ಕೊಂಡು ಕೂತಿರ್ತಾರ? ಎಂದು ಎಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದರು. ರಾಜಕೀಯ ಶಕ್ತಿ ದುರುಪಯೋಗ ಮಾಡುವ ಕೆಲಸವನ್ನು ರಾಮನಗರದಲ್ಲಿ ಮಾಡಿಲ್ಲ. ರಾಮನಗರದಲ್ಲಿ ಜನ 50 ಸಾವಿರ ಮುನ್ನಡೆ ನೀಡುವ ಭರವಸೆ ನೀಡಿದ್ದಾರೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ 25 ಸ್ಥಾನ ಗೆದ್ದು ದೇವೇಗೌಡರ ಮಡಿಲಿಗೆ ಸೇರಿಸೊದು ನನ್ನ ಮುಂದಿನ ಗುರಿ ಎಂದು ಹೇಳಿದರು. ದೇವೇಗೌಡರ ಕುಟುಂಬದಲ್ಲಿ ಇಂತ ಸವಾಲು ತೆಗೆದು ಕೊಳ್ಳೋದು ನಮ್ಮ ಒಳಿತಿಗಲ್ಲ. ನಾಡಿನ ಜನತೆ ಮತ್ತು ಕಾರ್ಯಕರ್ತರ ಒಳಿತಿಗೆ. ನಮ್ಮ ಪಕ್ಷವನ್ನ ಕುಟುಂಬದ ಪಕ್ಷ ಅಂತಾರೆ. ಆದ್ರೆ ಸಿಎಂ ಸಿದ್ದರಾಮಯ್ಯ ಮತ್ತು ಯಡಿಯೂರಪ್ಪ ಅವರ ಮಕ್ಕಳು ಏನು ಮಾಡಿದ್ದಾರೆ ಅಂತ ಚುನಾವಣೆಗೆ ನಿಲ್ಲಿಸಿದ್ದಾರೆ. ಅವ್ರು ಮಾಡ್ತಿರೋದು ಕುಟುಂಬ ರಾಜಕೀಯ ಅಲ್ಲವೇ? ಎಂದು ಕುಮಾರಸ್ವಾಮಿ ಮತ್ತೊಮ್ಮೆ ಪ್ರಶ್ನೆ ಹಾಕಿದರು. ಕುಮಾರಸ್ವಾಮಿಯಿಂದ ದೇವೇಗೌಡರ ರಾಜಕೀಯಕ್ಕೆ ಪೆಟ್ಟು ಬಿತ್ತು ಅನ್ನೊ ಕೂಗು ಕೇಳಿ ಬಂದಿದೆ. ಅದನ್ನ ನಿವಾರಿಸಲು ಪ್ರಯತ್ನ ಮಾಡುವೆ ಎಂದು ಹೇಳಿದರು. ಬಿಜೆಪಿ ಜೆಡಿಎಸ್ ಒಟ್ಟಾದ್ರು ನನ್ನ ಸೋಲಿಸಲಾಗಲ್ಲ ಅಂತಾರೆ. ಇದು ದುರಾಂಕರದ ಮಾತು. ಬಹುಷಃ ಅವರು ರಾಜಕೀಯ ಬಿಟ್ಟು ಜ್ಯೋತಿಷ್ಯ ಕಲಿತಿದ್ದಾರೆ. ಭವಿಷ್ಯ ನುಡಿಯೋಕೆ ಸಿದ್ದರಾಮಯ್ಯ ಜ್ಯೋತಿಷಿನಾ ಎಂದು ಪ್ರಶ್ನಿಸಿದ ಅವರು, ಜಮೀರ್ ಅಹಮ್ಮದ್ ಬಗ್ಗೆ ನಾನು ಮಾತಾಡಲ್ಲ. ಜಮೀರ್ ಅಹಮ್ಮದ್ ಒಬ್ಬ ರಾಜಕೀಯ ವಿದೂಷಕ ಎಂದು ಸಿಎಂ ಸಿದ್ದರಾಮಯ್ಯ ಮತ್ತು ಜಮೀರ್ ಗೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಟಾಂಗ್ ನೀಡಿದ್ದಾರೆ.
Comments