ಮಹಿಳೆ ಎಲ್ಲಾ ಕ್ಷೇತ್ರಗಳಲ್ಲಿ ಪುರುಷರಿಗೆ ಸಮಾನಳೆಂಬುದನ್ನು ಸಾಬೀತು ಮಾಡುತ್ತಿದ್ದಾಳೆ
ಮಕ್ಕಳಿಗೆ ಪಾಲಕರು ಬಾಲ್ಯದಲ್ಲಿ ಕಲಿಸುವ ಸಂಸ್ಕಾರದಿಂದ ಅವರ ಭವಿಷ್ಯ ರೂಪುಗೊಳ್ಳುತ್ತದೆ, ಹೆಣ್ಣುಮಕ್ಕಳ ಕುರಿತು ವಿಶೇಷ ಕಾಳಜಿ ಅಗತ್ಯ ಎಂದು ದೊಡ್ಡಬಳ್ಳಾಪುರ ನಗರ ಮಹಿಳಾ ಆರಕ್ಷಕ ಠಾಣೆ ಉಪನಿರೀಕ್ಷಕಿ ಬೇಬಿವಾಲೇಕರ್ ಹೇಳಿದರು. ಚೈತನ್ಯ ನಗರದ ದತ್ತಾತ್ರೇಯ ಕಲ್ಯಾಣ ಮಂದಿರದಲ್ಲಿ ಭಾನುವಾರ ಸ್ತ್ರೀಶಕ್ತಿ ಸಂಘ ಸ್ವರ್ಣಲತಾ ಪ್ರದೇಶ ಒಕ್ಕೂಟದಿಂದ ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಹಿಳೆಯರಿಗೆ ಸಂಪೂರ್ಣಿ ಸ್ವಾತಂತ್ರ್ಯ ಬೇಕು, ಮಹಿಳೆ ಮದ್ಯರಾತ್ರಿಯಲ್ಲಿ ಓಡಾಡಬೇಕಾದರೆ ಕಠಿಣ ಕಾನೂನಿನ ಅಗತ್ಯವಿದೆ, ಈಗಿರುವ ಕಾನೂನಿನಲ್ಲಿ ಅಪರಾಧಿಗಳು ಬೇಗ ಜಾಮೀನು ಪಡೆದು ರಾಜಾರೋಷವಾಗಿ ತಿರುಗಾಡಬಹುದು, ಅಪ್ರಾಪ್ತ ಬಾಲಕಿಯರ ದಿಕ್ಕುತಪ್ಪಿಸುವ ಪ್ರಕರಣಗಳು ಹೆಚ್ಚುತ್ತಿರುವುದು ಸರಿಯಲ್ಲ ಎಂದರು. ನಂದಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕಿ ಡಾ|| ಪದ್ಮಾಪ್ರಕಾಶ್ ಮಾತನಾಡಿ ಮಹಿಳೆ ಎಲ್ಲಾ ಕ್ಷೇತ್ರಗಳಲ್ಲಿ ಪುರುಷರಿಗೆ ಸಮಾನಳೆಂಬುದನ್ನು ಸಾಬೀತು ಮಾಡುತ್ತಿದ್ದಾಳೆ, ಕೆಲಸದ ಒತ್ತಡದಲ್ಲಿ ಆರೋಗ್ಯದ ಕಡೆ ಕಾಳಜಿ ವಹಿಸದೆ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾಳೆ ಎಂದು ಹೇಳಿದರು. ವಕೀಲೆ ರಾಧಾ ಮುರಳಿ, ಸಿಂಡಿಕೇಟ್ ಬ್ಯಾಂಕ್ ವ್ಯವಸ್ಥಾಪಕಿ ಪ್ರೇಮ್ ಜಿ, ಒಕ್ಕೂಟ ಅಧ್ಯಕ್ಷೆ ರುಕ್ಮಿಣಿದೇವಿ, ಕಾರ್ಯದರ್ಶಿ ಗಿರಿಜ, ಖಜಾಂಚಿ ಮಂಜುಳಾ ಮತ್ತು ಸದಸ್ಯರು ಹಾಜರಿದ್ದರು.
Comments