ಬಾಲಕೃಷ್ಣ ನನ್ನು ಮಣಿಸಲು ಮುಂದಾದ ಜೆಡಿಎಸ್ ನ ಈ ಪ್ರಭಾವಿ ನಾಯಕರು....!!
ರಾಮನಗರದ ಶಕ್ತಿ ದೇವತೆ ಚಾಮುಂಡೇಶ್ವರಿ ದೇವಿ ಪೂಜೆ ಸಲ್ಲಿಸಿ ನಂತರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಗಡಿ ಕ್ಷೇತ್ರದಲ್ಲಿ ಎ.ಮಂಜು ಅಭ್ಯರ್ಥಿ ಎಂದು ತಿಳಿಯದೇ, ನಾನೇ ಅಭ್ಯರ್ಥಿ ಎಂದು ತಿಳಿದು ನನ್ನ ಬೆಂಬಲಿಗರು, ಹಿತೈಷಿಗಳು ಎ.ಮಂಜು ಅವರಿಗೆ ಮತ ನೀಡುವ ಮೂಲಕ ಗೆಲ್ಲಿಸಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ಪೈಕಿ ಅತ್ಯಂತ ಕುತೂಹಲ ಕೆರಳಿಸಿರುವ ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಎ.ಮಂಜುನಾಥ್ ಅವರನ್ನು ಗೆಲ್ಲಿಸುವುದೇ ನನ್ನ ಪರಮ ಗುರಿ ಎಂದು ಕೆಂಪೇಗೌಡ ಅಭಿವೃದ್ಧಿ ಸಮಿತಿ ಜೇಡ್ರಳ್ಳಿ ಕೃಷ್ಣಮೂರ್ತಿ ಶಪಥ ಮಾಡಿದ್ದಾರೆ. ನಾನು ಜೆಡಿಎಸ್ ಪಕ್ಷ ಸೇರ್ಪಡೆಗೂ ಮುನ್ನ ವಿವಿಧ ಮಾತುಗಳು ಕೇಳಿ ಬಂದಿದ್ದವು. ಜೆಡಿಎಸ್ ಪಕ್ಷದ ರಾಜ್ಯ ಉಪಾಧ್ಯಕ್ಷನನ್ನಾಗಿ ಜೆಡಿಎಸ್ ನ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ನೇಮಕ ಮಾಡಿದ್ದಾರೆ. ರಾಜ್ಯಾದ್ಯಂತ ಸಂಚಾರ ಮಾಡಿ ಜೆಡಿಎಸ್ ಅಭ್ಯರ್ಥಿಗಳ ಗೆಲುವಿಗೆ ಶಕ್ತಿ ಮೀರಿ ಶ್ರಮಿಸುತ್ತೇನೆ ಎಂದರು.
ಕೃಷ್ಣಮೂರ್ತಿ ಸ್ಥಿರತೆ ಹೊಂದಿರದ ಮನುಷ್ಯ ಎಂಬಿತ್ಯಾದಿ ಆರೋಪಗಳಿವೆಯಲ್ಲ ಎಂಬ ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಕೃಷ್ಣಮೂರ್ತಿ, ಎ.ಮಂಜು ಅವರನ್ನು ಮಾಗಡಿಯಲ್ಲಿ ಗೆಲ್ಲಿಸಿ ನನ್ನ ಸ್ಥಿರತೆ ಏನೆಂಬುದನ್ನು ತೋರಿಸುತ್ತೇನೆ. ಕಳೆದ ಚುನಾವಣೆಯಲ್ಲಿ ನಾನೇ ಅಭ್ಯರ್ಥಿಯಾಗಿದ್ದೆ, ಹಿಂದಿನ ಸನ್ನಿವೇಶವೇ ಬೇರೆ, ಈಗಿನ ಸನ್ನಿವೇಶವೇ ಬೇರೆ, ಮಾಗಡಿ ಕ್ಷೇತ್ರದ ಮತದಾರ ಒಂದೇ ಉದ್ದೇಶ ಶಾಸಕ ಬಾಲಕೃಷ್ಣ ಅವರನ್ನು ಸೋಲಿಸುವುದು, ಈ ನಿಟ್ಟಿನಲ್ಲಿ ನಾವೆಲ್ಲ ಒಟ್ಟಾಗಿ ಸೇರಿ ಮಂಜು ಅವರನ್ನು ಗೆಲ್ಲಿಸುವುದೇ ನನ್ನ ಗುರಿಯಾಗಿದೆ ಎಂದು ಎಂದು ಹೇಳಿದರು.
ಕೃಷ್ಣಮೂರ್ತಿ ಸಮಾಜ ಸೇವೆಯನ್ನು ತನ್ನ ಸ್ವಂತಹಣದಲ್ಲಿ ಮಾಡಿಕೊಂಡು ಬರುತ್ತಿದ್ದು, ಯಾರ ಬಳಿಯೂ ಹಣಕ್ಕಾಗಿ ಕೈಚಾಚಿಲ್ಲ. ನನ್ನ ವಿರುದ್ಧ ಆರೋಪಗಳಿಗೆ ಕಾಲವೇ ಉತ್ತರ ನೀಡಲಿದೆ. ಮಾಗಡಿ ಕ್ಷೇತ್ರದಲ್ಲಿ ಒಂದೇ ತಾಯಿಯ ಮಕ್ಕಳಂತೆ ಕೆಲಸ ಮಾಡಿ ಮಂಜು ಅವರನ್ನು ಗೆಲ್ಲಿಸಿಯೇ ತಿರುತ್ತೇನೆ ಎಂದರು.ಮಾಗಡಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎ.ಮಂಜುನಾಥ್ ಮಾತನಾಡಿ, ಕೃಷ್ಣಮೂರ್ತಿ ಅವರ ಶಕ್ತಿಯನ್ನು ಅರಿತೇ ದೇವೇಗೌಡರು ಪಕ್ಷಕ್ಕೆ ಬರಮಾಡಿಕೊಂಡು ಉಪಾಧ್ಯಕ್ಷ ಸ್ಥಾನವನ್ನು ನೀಡಿದ್ದಾರೆ. ಮಾಗಡಿ ಸೇರಿದಂತೆ ಬೆಂಗಳೂರಿನ 7-8 ಕ್ಷೇತ್ರಗಳಲ್ಲಿ ತನ್ನದೇ ಆದ ಪ್ರಭಾವವನ್ನು ಹೊಂದಿದ್ದಾರೆ. ಈ ಬಾರಿ ಜೆಡಿಎಸ್ ಅಧಿಕಾರಕ್ಕೆ ಬರುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.
ಯಾವುದೇ ರಾಜಕೀಯ ಹಿನ್ನಲೆ ಇಲ್ಲದೆ, ಸಿರಿವಂತ ಕುಟುಂಬ ಹೊಂದಿರಂತಹ ವ್ಯಕ್ತಿಗಳಿಗೆ ರಾಜಕೀಯ ಮನ್ನಣೆ ನೀಡುವ ಪಕ್ಷ ಎಂದರೆ ಅದು ಪ್ರಾದೇಶಿಕ ಜೆಡಿಎಸ್ ಪಕ್ಷ ಆಗಿದೆ. ಯಾವುದೇ ಹಿನ್ನಲೆ ಇಲ್ಲದಿದ್ದರೂ ರಾಜಕೀಯವಾಗಿ ವ್ಯಕ್ತಿ ಬೆಳೆಯಬೇಕಾದರೆ ಜೆಡಿಎಸ್ ಪಕ್ಷ ಆದ್ಯತೆ ನೀಡುತ್ತದೆ ಎಂದು ಮಂಜು ಪಕ್ಷದ ಬದ್ಧತೆ ಬಗ್ಗೆ ಹೇಳಿದರು.ಮುಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಎನ್ನುವ ಬಗ್ಗೆ ಇಡೀ ರಾಜ್ಯದಲ್ಲಿ ಅಲೆ ಎದ್ದಿದೆ. ಮಾಗಡಿ ಸೇರಿದಂತೆ ರಾಮನಗರ ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲೂ ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಬೇಕಿದೆ. ಕಾರ್ಯಕರ್ತರು ಹೆಚ್ಚಿನ ಮುತುವರ್ಜಿ ವಹಿಸಿ, ಮನೆ ಮನೆಗೆ ಪ್ರಚಾರ ನಡೆಸುವ ಮೂಲಕ ಚುನಾವಣೆಯಲ್ಲಿ ಕಾರ್ಯನಿರ್ವಹಿಸಬೇಕಿದೆ ಎಂದರು.
ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗುವ ಬಗ್ಗೆ ಹಗಲುಗನಸು ಕಾಣುತ್ತಿದ್ದಾರೆ ಎಂಬ ಸಂಸದ ಡಿ.ಕೆ.ಸುರೇಶ್ ಅವರು ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಮಂಜು, ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗುವ ಕನಸೇ ಕಂಡಿರಲಿಲ್ಲ. ಮುಖ್ಯಮಂತ್ರಿಯಾಗಿ ಜನರ ಮನಸ್ಸಿನಲ್ಲಿ ಉಳಿಯುವಂತಹ ಜನಪರ ಆಡಳಿತ ನೀಡಲಿಲ್ಲವೆ? ಅದೇ ರೀತಿ 2018ಕ್ಕೆ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಬೇಕೆಂಬ ಜನರು ಕನಸು ಕಂಡಿದ್ದಾರೆ. ಕನಸು ನನಸಾಗುವುದು ಖಚಿತ ಎಂದರು.ಕಳೆದ ಮಾಗಡಿ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಜಿಲ್ಲೆಯ ಮುಖಂಡರು ಕೃಷ್ಣಮೂರ್ತಿ- ಮಂಜು ಅವರನ್ನು ಒಂದು ಮಾಡುವ ಕೆಲಸವನ್ನು ಮಾಡಲೇ ಇಲ್ಲ. ದೇವೇಗೌಡರು ಕೃಷ್ಣಮೂರ್ತಿ ಅವರೊಂದಿಗೆ ಚರ್ಚಿಸಿ ಜೆಡಿಎಸ್ ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ. ಈ ಹಿನ್ನಲೆಯಲ್ಲಿ ನನ್ನ ಗೆಲುವಿನ ಹಾದಿ ಸುಲಭವಾಗಿದೆ ಎಂದು ಎ.ಮಂಜು ಆತ್ಮವಿಶ್ವಾಸ ವ್ಯಕ್ತಪಡಿಸಿದರು.
Comments