ಮುಂದಿನ ಸರ್ಕಾರ ರಚನೆ ಬಗ್ಗೆ ಭವಿಷ್ಯ ನುಡಿದ ದೇವೇಗೌಡ್ರು..!!

30 Mar 2018 1:26 PM |
7559 Report

ಬಿಜೆಪಿ ಮತ್ತು ಕಾಂಗ್ರೆಸ್ ರಾಷ್ಟ್ರೀಯ ಪಕ್ಷಗಳಿಂದ ರಾಜ್ಯಕ್ಕೆ ಮತ್ತು ಜಿಲ್ಲೆಗೆ ಭಾರೀ ಅನ್ಯಾಯವಾಗಿದೆ. ಈ ಬಾರಿ ಜೆಡಿಎಸ್ ಸ್ವಂತ ಬಲದ ಮೇಲೆ ಸರ್ಕಾರ ರಚನೆ ಮಾಡಲಿದೆ. ಯಾರೊಂದಿಗೂ ಮೈತ್ರಿ ಪ್ರಶ್ನೆಯೇ ಇಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯೊಂದಿಗೆ ಮಾತನಾಡಿದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು, 1994ರಲ್ಲಿ 113 ಸ್ಥಾನಗಳನ್ನು ಪಡೆದು ಸ್ವತಂತ್ರವಾಗಿ ಸರ್ಕಾರ ರಚನೆ ಮಾಡಲಾಗಿತ್ತು. ಅದೇ ರೀತಿ ಈ ಬಾರಿಯೂ ಸಹ ಪಕ್ಷ ಬಹುಮತದಿಂದ ಸರ್ಕಾರ ರಚನೆ ಮಾಡುವುದು ನಿಶ್ಚಿತ ಎಂದು ಭವಿಷ್ಯ ನುಡಿದರು. ಸಿ ಫೋರ್ ಸಮೀಕ್ಷೆಗಳ ಬಗ್ಗೆ ನನಗೆ ನಂಬಿಕೆ ಇಲ್ಲ. ಜನರ ವಿಶ್ವಾಸ ನಮ್ಮ ಮೇಲಿದೆ. ಅಧಿಕಾರ ಹಿಡಿಯುವುದು ನಾವೇ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಜಿಲ್ಲೆಗೆ ಐಐಟಿ ಮತ್ತು ವಿಮಾನ ನಿಲ್ದಾಣ ಸ್ಥಾಪನೆಗೆ ಬಹಳಷ್ಟು ಶ್ರಮ ಪಟ್ಟಿದ್ದೆ. ರಾಷ್ಟ್ರೀಯ ಪಕ್ಷಗಳು ಈ ಯೋಜನೆಗಳಿಗೆ ತೊಡಕು ಮಾಡಿದ್ದವು. ಇದರಿಂದ ರಾಷ್ಟ್ರೀಯ ಪಕ್ಷಗಳ ಮೇಲೆ ತುಂಬಾ ಬೇಸರವಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗುತ್ತಾರೆ ಎಂದು ರಾಜ್ಯದ ಜನತೆ ಹೇಳುತ್ತಿದ್ದಾರೆ. ಅವರ ಮೇಲೆ ಭಾರೀ ವಿಶ್ವಾಸವಿಟ್ಟುಕೊಂಡಿದ್ದಾರೆ. ಮಗನ ಮೇಲಿನ ಮಮಕಾರದಿಂದ ಈ ಮಾತು ಹೇಳುತ್ತಿಲ್ಲ. ಜನರು ಬುದ್ಧಿವಂತರಿದ್ದಾರೆ. ರಾಷ್ಟ್ರೀಯ ಪಕ್ಷಗಳಿಂದ ಬೇಸತ್ತು ಹೋಗಿದ್ದು, ಹಾಗಾಗಿ ಈ ಬಾರಿ ಪ್ರಾದೇಶಿಕ ಪಕ್ಷವಾದ ಜೆಡಿಎಸ್‍ ಅನ್ನು ಅಧಿಕಾರಕ್ಕೆ ತರಲಿದ್ದಾರೆ ಎಂದರು.

Edited By

Shruthi G

Reported By

hdk fans

Comments