ದೇವೇಗೌಡರ ಬಗ್ಗೆ ಮಾತನಾಡಿದ ರಾಹುಲ್‍ಗಾಂಧಿಗೆ ಟಾಂಗ್ ಕೊಟ್ಟ ಮಾಜಿ ಸಂಸದ ಎಚ್.ವಿಶ್ವನಾಥ್
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಂಸದ ಎಚ್.ವಿಶ್ವನಾಥ್ ಅವರು, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪಾಪಾ ಪಾಂಡು ಇದ್ದಂತೆ ಎಂದು ಗೇಲಿ ಮಾಡಿದ್ದಾರೆ. ರಾಹುಲ್‍ಗಾಂಧಿಗೆ ನಮ್ಮ ರಾಜ್ಯದ ರಾಜಕೀಯದ ಸಂಸ್ಕೃತಿಯೇ ಗೊತ್ತಿಲ್ಲ. ಯಾರೋ ಬರೆದುಕೊಟ್ಟ ಭಾಷಣವನ್ನು ಓದಿ ಹೋಗುತ್ತಾರೆ ಎಂದು ಟೀಕಿಸಿದರು. ವಿಶ್ವೇಶ್ವರಯ್ಯನವರ ಹೆಸರನ್ನು ಸಹ ಅವರಿಗೆ ಹೇಳಲು ಬರುವುದಿಲ್ಲ. ವಚನಗಳನ್ನು ಹೇಳಲು ಹೋಗ್ತಾರೆ. ಅದೂ ಅಸಂಬದ್ಧವಾಗಿ ಉಚ್ಛರಿಸುತ್ತಾರೆ.ಅವರು ಪಾಪಾ ಪಾಂಡು ಇದ್ದಂತೆ ಎಂದರು.
ಜೆಡಿಎಸ್‍ನಿಂದ ಏಳು ಮಂದಿ ಕಾಂಗ್ರೆಸ್‍ಗೆ ಹೋಗಿದ್ದಾರೆ ಅವರು ಕ್ರಿಕೆಟ್ ಟೀಮ್‍ನಲ್ಲಿ ಎಕ್ಸ್‍ಟ್ರಾ ಪ್ಲೇಯರ್ ಗಳಿದ್ದಂತೆ. ರಾಜ್ಯ ಕಾಂಗ್ರೆಸ್ ಒಂದು ಕ್ರಿಕೆಟ್ ತಂಡ ಇದ್ದಂತೆ. ಅದರಲ್ಲಿ ಸಿದ್ಧರಾಮಯ್ಯ ಹಾಗೂ ಅವರ ತಂಡದವರು ಪ್ರಮುಖ ಆಟಗಾರರು. ಅವರನ್ನು ಬಿಟ್ಟರೆ ಖರ್ಗೆ, ಪರಮೇಶ್ವರ್ ಸೇರಿದಂತೆ ಮೂಲ ಕಾಂಗ್ರೆಸಿಗರು ಹೊರಗಡೆ ಅವಕಾಶಕ್ಕಾಗಿ ಕಾಯುತ್ತಿರುವ ಆಟಗಾರರು ಎಂದು ವ್ಯಂಗ್ಯವಾಡಿದ್ದಾರೆ. ಜೆಡಿಎಸ್ ಬಿ ಟೀಮ್ ಎಂದು ಕಾಂಗ್ರೆಸ್‍ನವರು ಹೇಳಿದ್ದಾರೆ. ಆದರೆ ಇದೇ ಸಿದ್ಧರಾಮಯ್ಯ ಬಿ ಟೀಮ್‍ನಲ್ಲಿದ್ದೇ ಕಾಂಗ್ರೆಸ್‍ಗೆ ಹೋಗಿ ಮುಖ್ಯಮಂತ್ರಿಯಾಗಿದ್ದಾರೆ. ಇದು ಎಲ್ಲರಿಗೂ ಗೊತ್ತಿರುವ ವಿಷಯ ಎಂದರು. ರಾಜ್ಯ ರಾಜಕಾರಣದ ಅರಿವೇ ಇಲ್ಲದ ರಾಹುಲ್‍ಗಾಂಧಿ ನಮ್ಮ ಜೆಡಿಎಸ್ ರಾಷ್ಟ್ರಾಧ್ಯಕ್ಷ ದೇವೇಗೌಡರ ಬಗ್ಗೆ ಮಾತನಾಡುತ್ತಾರೆ. ದೇವೇಗೌಡರ ಬಗ್ಗೆ ಎಳ್ಳಷ್ಟೂ ವಿಷಯ ಗೊತ್ತಿಲ್ಲ. ಎನ್‍ಸಿಸಿ ನೆಹರು ಯುವಕ ಕೇಂದ್ರದ ಬಗ್ಗೆಯೂ ಗೊತ್ತಿಲ್ಲದವರು ದೇವೇಗೌಡರ ಕುರಿತು ಮಾತನಾಡಲು ಬರುತ್ತಾರೆ. ಅವರ ತಾತನ ಹೆಸರಿನಲ್ಲಿರುವ ಕೇಂದ್ರದ ಬಗ್ಗೆಯೇ ಗೊತ್ತಿಲ್ಲದ ಅವರು ರಾಷ್ಟ್ರದ ಪ್ರಧಾನಿಯಾಗಲು ಹೊರಟಿದ್ದಾರೆ ಎಂದು ಟೀಕಾಪ್ರಹಾರ ನಡೆಸಿದರು. ಜೆಡಿಎಸ್ ಮುಸ್ಲಿಮರ ವಿರುದ್ಧ ಎಂದು ಕಾಂಗ್ರೆಸ್‍ನವರು ಹೇಳುತ್ತಿದ್ದಾರೆ. ಇಂತಹ ಮಾತುಗಳನ್ನು ಯಾರೂ ನಂಬಬಾರದೆಂದು ವಿಶ್ವನಾಥ್ ಮನವಿ ಮಾಡಿದರು. ದೇವೇಗೌಡರೆ ಮುಸ್ಲಿಮರಿಗೆ 4 ಪರ್ಸೆಂಟ್ ಮೀಸಲಾತಿ ನೀಡಿದ್ದರೆಂಬುದನ್ನು ಯಾರೂ ಮರೆಯುವಂತಿಲ್ಲ ಎಂದರು. ಸಿದ್ದರಾಮಯ್ಯ ಹೋದೆಡೆಯೆಲ್ಲೆಲ್ಲ ಸಭೆ, ಸಮಾರಂಭಗಳಲ್ಲಿ ಶಿವಶರಣರ ವಚನಗಳನ್ನು ಹೇಳುತ್ತಿದ್ದಾರೆ. ವಚನಗಳ ಸಾರದಂತೆ ನಡೆದುಕೊಳ್ಳುತ್ತಿಲ್ಲ ಎಂದು ದೂರಿದರು.
Comments