ಬಿಜೆಪಿಯನ್ನು ಮಣಿಸಲು 'ದಳ' ಪತಿಯ ಹೊಸ ದಾಳ..!!
ಸಂವಿಧಾನ ಉಳಿವಿಗಾಗಿ ಕರ್ನಾಟಕ ಸಂಘಟನೆ ನಿಯೋಗ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ ದೇವೇಗೌಡರನ್ನು ಭೇಟಿ ಮಾಡಿತು. ಪದ್ಮನಾಭನಗರದಲ್ಲಿರುವ ದೇವೇಗೌಡರ ನಿವಾಸಕ್ಕೆ ತೆರಳಿ ಭೇಟಿ ನೀಡಿದ ಸಂಘಟನೆ ಸದಸ್ಯರು, ಬಿಜೆಪಿಯನ್ನು ಸೋಲಿಸಲು ಜೆಡಿಎಸ್ ಕಾಂಗ್ರೆಸ್ ಒಂದಾಗಬೇಕು ಎಂದು ಮನವಿ ಸಲ್ಲಿಕೆ ಮಾಡಿದರು.ಕಾಂಗ್ರೆಸ್ ಜೊತೆ ಜೆಡಿಎಸ್ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಸುಳಿವು ನೀಡಿದ್ದು, ಚುನಾವಣೆ ದಿನಾಂಕ ಘೋಷಣೆಯಾದ ಬೆನ್ನಲ್ಲೇ ಸಾಕಷ್ಟು ಕುತೂಹಲ ಮೂಡಿಸಿದೆ.
ಜೆಡಿಎಸ್ ಹಾಗೂ ಕಾಂಗ್ರೆಸ್ ಟಿಕೆಟ್ ಹೊಂದಾಣಿಕೆ ಮಾಡಿಕೊಳ್ಳಬೇಕು ಓಟು ಒಡೆಯದಂತೆ ತಡೆಯಲು ಈ ಪ್ಲಾನ್ ಮಾಡಬೇಕು ಬಿಜೆಪಿಯನ್ನು ಸೋಲಿಸಬೇಕು ಸಮ್ಮಿಶ್ರ ಸರ್ಕಾರ ಬಂದಲ್ಲಿ ಯಾವುದೇ ಕಾರಣಕ್ಕೂ ಬಿಜೆಪಿ ಜೊತೆ ಕೈ ಜೋಡಿಸಬಾರದು ಎಂದು ಸಂಘಟನೆ ಸದಸ್ಯರು ದೇವೇಗೌಡರಿಗೆ ಮನವಿ ಮಾಡಿದರು. ಮನವಿ ಆಲಿಸಿದ ದೇವೇಗೌಡರು, ಜೆಡಿಎಸ್ ಸ್ಪರ್ಧೆ ಮಾಡಿದರೆ ಎಲ್ಲೆಲ್ಲಿ ಕಾಂಗ್ರೆಸ್‌ಗೆ ಸಮಸ್ಯೆ ಆಗಿ ಬಿಜೆಪಿಗೆ ಪ್ಲಸ್ ಆಗಲಿದೆ ಎನ್ನುವ ಬಗ್ಗೆ ಪಟ್ಟಿ ಕೊಡಿ, ಅದನ್ನು ಪರಿಶೀಲನೆ ಮಾಡುತ್ತೇನೆ. ನೀವೆಲ್ಲಾ ಸದುದ್ದೇಶದಿಂದ ಬಂದಿದ್ದೀರಿ ಹಾಗಾಗಿ ನಿಮ್ಮ ಮನವಿಯನ್ನು ಪರಿಶೀಲಿಸುತ್ತೇನೆ ಎಂದು ಭರವಸೆ ನೀಡಿದರು. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಬಾಯಿಗೆ ಬಂದಂತೆ ಮಾತಾಡುತ್ತಿದ್ದಾರೆ. ಜೆಡಿಎಸ್ ಬಗ್ಗೆ ಸಂಘಪರಿವಾರ, ಬಿಜೆಪಿ ಬಿ ಟೀಂ ಎಂದೆಲ್ಲಾ ಹೇಳ್ತಾರೆ ಕಾಂಗ್ರೆಸ್‌ಗೆ ಅಲ್ಪಸಂಖ್ಯಾತರ ಬಗ್ಗೆ, ದಲಿತರ ಬಗ್ಗೆ ಏನು ಕಾಳಜಿ ಇದೆ ಈವರೆಗೆ ಏನು ಮಾಡಿದ್ದಾರೆ, ಸಿಎಂ ತಮ್ಮ ಸಮುದಾಯದವರನ್ನೇ ಎಲ್ಲ ಕಡೆ ತುಂಬ್ತಾ ಇದ್ದಾರೆ ಎಂದು ಪ್ರಗತಿಪರರ ಜೊತೆಗಿನ ಸಭೆಯಲ್ಲಿ ದೇವೇಗೌಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್ ನಮಗೆ ಎಷ್ಟು ಸೀಟ್ ಬಿಟ್ಟು ಕೊಡುತ್ತದೆ. ನಾವು ಅವರಿಗೆ ಎಷ್ಟು ಸೀಟ್ ಬಿಟ್ಟು ಕೊಡಬೇಕು.ಈ ಬಗ್ಗೆ ಕಾಂಗ್ರೆಸ್ ಚರ್ಚಿಸಿ ತೀರ್ಮಾನ ತಿಳಿಸಲಿ. ಕಾಂಗ್ರೆಸ್ ದೊಡ್ಡ ಪಕ್ಷ, ಹಾಗಾಗಿ ಅವರೇ ಮೊದಲು ಲಿಸ್ಟ್ ಕಳಿಸಲಿ, ಸಮಾಜವಾದಿ ಪಾರ್ಟಿ ಸೀಟ್ ಕೇಳಿದರೂ ಬಿಟ್ಟು ಕೊಡಲು ನಾವು ಸಿದ್ಧ ಎನ್ನುವ ಮೂಲಕ ಚುನಾವಣಾ ಪೂರ್ವ ಮೈತ್ರಿಕೂಟ ರಚನೆಗೆ ದೇವೇಗೌಡ ಒಲವು ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
Comments