ಚುನಾವಣಾ ಸ್ಪರ್ಧೆ ಬಗ್ಗೆ ಟ್ವಿಸ್ಟ್ ಕೊಟ್ಟ ಎಚ್ ಡಿಕೆ

ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಈ ಬಾರಿ ರಾಮನಗರ ಮತ್ತು ಚನ್ನಪಟ್ಟಣದಿಂದ ಸ್ಪರ್ಧಿಸುತ್ತಾರೆ ಎಂಬ ಸುದ್ದಿಗಳು ಕೇಳಿ ಬಂದಿದೆ. ಅವರ ಈ ನಿರ್ಧಾರಕ್ಕೆ ಕಾರ್ಯಕರ್ತರಲ್ಲಿ ವಿರೋಧ ವ್ಯಕ್ತವಾಗಿದೆ. ಜತೆಗೆ ಎರಡು ಕ್ಷೇತ್ರದಲ್ಲಿ ಸ್ಪರ್ಧಿಸಲು ಕಾರಣವೇನು ಎಂಬುದು ಕೂಡ ಬಯಲಾಗಿದೆ.
ಒಂದು ಕಡೆ ರಾಮನಗರ ವಿಧಾನಸಭಾ ಕ್ಷೇತ್ರದಿಂದಲೇ ಸ್ಪರ್ಧಿಸಿ ಎಂದು ಕಾರ್ಯಕರ್ತರು ಹೇಳುತ್ತಿದ್ದರೆ ಮತ್ತೊಂದೆಡೆ ಚನ್ನಪಟ್ಟಣದಿಂದ ಸ್ಪರ್ಧಿಸಿ, ಸಿ.ಪಿ.ಯೋಗೇಶ್ವರ್ ಗೆ ಟಾಂಗ್ ನೀಡಿ ಎಂಬ ಒತ್ತಾಯಗಳು ಕೇಳಿ ಬಂದಿವೆ. ಹೀಗಾಗಿ ಎರಡು ಕಡೆಯಿಂದ ಸ್ಪರ್ಧಿಸುವ ತೀರ್ಮಾನವನ್ನು ಕುಮಾರಸ್ವಾಮಿ ಮಾಡಿದ್ದಾರೆ ಎನ್ನಲಾಗುತ್ತಿದೆ. ಎರಡು ಕಡೆ ಸ್ಪರ್ಧಿಸುವುದಕ್ಕೆ ಕುಮಾರಸ್ವಾಮಿ ಅವರು ನೀಡುತ್ತಿರುವ ಕಾರಣ ಏನೆಂದರೆ ಚನ್ನಪಟ್ಟಣದಲ್ಲಿ ಸ್ಥಳೀಯ ಅಭ್ಯರ್ಥಿಯನ್ನೇ ಕಣಕ್ಕಿಳಿಸುವುದು ದೇವೇಗೌಡರು ಮತ್ತು ಅವರ ನಿಲುವುವಾಗಿತ್ತು. ಆದರೆ, ಅಲ್ಲಿನ ಕಾರ್ಯಕರ್ತರು ಪತ್ನಿ ಅನಿತಾರನ್ನು ಕಣಕ್ಕಿಳಿಸಲು ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ. ದೇವೇಗೌಡರ ಕುಟುಂಬದಿಂದ ಇಬ್ಬರು ಮಾತ್ರ ಸ್ಪರ್ಧಿಸುವ ನಿರ್ಧಾರ ತೆಗೆದುಕೊಂಡಿರುವುದರಿಂದ ಚನ್ನಪಟ್ಟಣದ ಮುಖಂಡರು ಕುಮಾರಸ್ವಾಮಿ ಅವರನ್ನೇ ಸ್ಪರ್ಧಿಸುವಂತೆ ಪಟ್ಟು ಹಿಡಿದಿದ್ದಾರಂತೆ. ಹೀಗಾಗಿಯೇ ಕುಮಾರಸ್ವಾಮಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಲು ತೀರ್ಮಾನಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಬೇಕಾದರೆ ಪ್ರತಿ ಕ್ಷೇತ್ರವೂ ಮುಖ್ಯ. ರಾಮನಗರವನ್ನು ಯಾವುದೇ ಕಾರಣಕ್ಕೂ ಕಡೆಗಣಿಸುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ. 'ರಾಮನಗರ ತಮ್ಮ ಕರ್ಮಭೂಮಿ. ಈ ಕ್ಷೇತ್ರದೊಂದಿಗೆ ತಾಯಿ ಮಗನ ಸಂಬಂಧ ಇದೆ. ತಾವು ಮಣ್ಣಾಗುವುದು ಸಹ ರಾಮನಗರದ ಮಣ್ಣಿನಲ್ಲೇ,' ಎಂಬ ಮಾತಿನಿಂದ ಕುಮಾರಸ್ವಾಮಿಯವರು ಭಾವುಕರಾದರು.
Comments