ಜೆಡಿಎಸ್, ಬಿಜೆಪಿಯ 'ಬಿ' ಟೀಮ್ ಎಂಬ ರಾಹುಲ್ ಗಾಂಧಿ ಹೇಳಿಕೆಗೆ ತಿರುಗೇಟು ಕೊಟ್ಟ ಎಚ್ ಡಿಕೆ
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಿವೇಚನೆಯಿಂದ ಹೇಳಿಕೆ ನೀಡಿದರೊ ಅಥವಾ ಯಾರಾದರೂ ಬರೆದುಕೊಟ್ಟ ಹೇಳಿಕೆಯನ್ನು ಉಲ್ಲೇಖಿಸಿದರೊ ಗೊತ್ತಿಲ್ಲ. ಆದರೆ, ರಾಹುಲ್ ಅವರ ಅಪ್ರಬುದ್ಧತೆಯ ಬಗ್ಗೆ ನನಗೆ ಮರುಕವಿದೆ' ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.
ಜೆಡಿಎಸ್, ಬಿಜೆಪಿಯ 'ಬಿ' ಟೀಮ್ ಎಂಬ ರಾಹುಲ್ ಗಾಂಧಿ ಹೇಳಿಕೆಗೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಈ ರೀತಿ ತಿರುಗೇಟು ನೀಡಿದ್ದಾರೆ. ಯೋಗ್ಯತೆಯಿಂದಲೋ ಅಥವಾ ಯೋಗದಿಂದಲೋ ರಾಹುಲ್ ಅಧ್ಯಕ್ಷರಾಗಿದ್ದಾರೆ. ಕರ್ನಾಟಕ ಕಾಂಗ್ರೆಸ್ ಪಕ್ಷದ ಸ್ವರೂಪವನ್ನು ಅವಲೋಕಿಸಿದ್ದರೆ ಇಂಥ ಬಾಲಿಶ ಹೇಳಿಕೆಯನ್ನು ನೀಡುತ್ತಿರಲಿಲ್ಲ ಎಂದಿದ್ದಾರೆ. ಕಾಂಗ್ರೆಸ್ ಸರಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೂಲ ನಿಮಗೆ ಗೊತ್ತೆ ರಾಹುಲ್ ಗಾಂಧಿಯವರೇ? ಅವರು ನಮ್ಮ ಪಕ್ಷದಲ್ಲಿ ವಿದ್ಯೆ ಕಲಿತು ಹೋದವರು. ಅವರ ಸಂಪುಟದಲ್ಲಿರುವ ಅರ್ಧಕ್ಕರ್ಧ ಮಂದಿ ದೇವೇಗೌಡರ ಗರಡಿಯಲ್ಲಿ ಅಭ್ಯಾಸ ಮಾಡಿದವರು. ಇನ್ನು ನಿಮ್ಮ ಪಕ್ಷದ ಶಾಸಕರಲ್ಲಿ ಎಷ್ಟು ಮಂದಿ ಮೂಲ ಜನತಾದಳದವರು ಎಂಬುದು ನಿಮಗೆ ಗೊತ್ತಿದೆಯೇ ರಾಹುಲ್ ಗಾಂಧಿಯವರೇ? ಎಂದು ಎಚ್ಡಿಕೆ ಪ್ರತಿಕ್ರಿಯಿಸಿದ್ದಾರೆ. ಜೆಡಿಎಸ್ ನನ್ನು ಬಿಜೆಪಿಯೊಂದಿಗೆ ಥಳಕುಹಾಕಿ ನೀವು ಇಲ್ಲಿ ತತ್ವ ಸಿದ್ದಾಂತಗಳ ಪ್ರಶ್ನೆ ಎತ್ತಿದ್ದೀರಿ. ಜೆಡಿಎಸ್ ಜಾತ್ಯತೀತ ಪಕ್ಷ ಅಲ್ಲ ಎಂದು ಜನರಿಗೆ ಸುಳ್ಳು ಹೇಳಲು ನೀವು ಹೊರಟಿದ್ದೀರಿ. ಬಿಜೆಪಿ ಒಂದು ಮಾದರಿಯ ಮೂಲಭೂತವಾದವನ್ನು ಪ್ರತಿಪಾದಿಸುತ್ತಿದ್ದರೆ, ನೀವು ಅಲ್ಪಸಂಖ್ಯಾತರ ರಕ್ಷಣೆಯ ಹೆಸರಲ್ಲಿ ದೇಶದಲ್ಲಿ ಡೋಂಗಿ ಜಾತ್ಯತೀತತೆ ಪ್ರತಿಪಾದಿಸುತ್ತಿದ್ದೀರಿ ಎಂದು ಟೀಕಿಸಿದ್ದಾರೆ. ಕಾಂಗ್ರೆಸ್-ಬಿಜೆಪಿ ಓಲೈಕೆಯೇ ಹೊರತು ಜಾತ್ಯತೀತತೆಯಲ್ಲ. ಎಲ್ಲರನ್ನೂ ಒಳಗೊಳ್ಳುವಿಕೆ ಮೂಲಕ ಭವಿಷ್ಯದತ್ತ ಹೆಜ್ಜೆ ಹಾಕುವುದು ಜಾತ್ಯತೀತತೆ, ಪ್ರಗತಿಪರತೆ. ಜೆಡಿಎಸ್ ಆ ಹಾದಿಯಲ್ಲಿ ನಡೆಯುತ್ತಿದೆ. ನಮ್ಮ ಪಕ್ಷದ ಸಿದ್ದಾಂತಗಳ ವಿಚಾರದಲ್ಲಿ ಕಾಳಜಿಯೂ ಬೇಡ, ಅನುಮಾನವೂ ಬೇಡ ಎಂದು ತಿಳಿಸಿದ್ದಾರೆ.
Comments