ಎರಡು ಬೆಕ್ಕು, ಒಂದು ಕಾಣೆ ಮೀನು, ಒಂದು ಕೋತಿ ಡಿವೈಡರ್ ನ್ಯಾಯ
ಒಮ್ಮೆ ಎರಡು ಬೆಕ್ಕುಗಳಿಗೆ ಒಂದು ಕಾಣೆ ಮೀನ್ ಸಿಕ್ತಂತೆ. ಬೆಕ್ಕುಗಳು ಇದು ನನ್ದೂ ಇದು ನನ್ದೂ ಅಂತ ಜಗಳ ಆಡೋದಕ್ಕೆ ಶುರು ಮಾಡಿದ್ವಂತೆ. ಕೊನೆಗೆ ಹೀಗೆ ಜಗಳ ಮಾಡ್ತ ಇದ್ರೆ ಮೀನು ಹಳಸಿ ರುಚಿ ಕೆಡುತ್ತೆ, ಯಾರ್ ಹತ್ರಾನಾದ್ರೂ ಸಲಹೆ ಕೇಳ್ಕೊಂಬಂದು ಬೇಗ ಬೇಗ ತಿನ್ನೋಣ ಅಂತ ಯೋಚಿಸಿದವಂತೆ. ಆಗಲೇ ಅವಕ್ಕೆ ಒಂದು ಕೋತಿ ಕಾಣಿಸ್ಬೇಕಾ! ಈ ಬೆಕ್ಕುಗಳು ಕೋತಿ ಹತ್ರ ತಮ್ಮ ಪ್ರಾಬ್ಲಮ್ ಹೇಳ್ಕೊಂಡ್ವಂತೆ, ಕೋತಿ ಹೇಳ್ತು: ಇದಕ್ಯಾಕ್ ಟೆನ್ಷನ್ ಮಾಡ್ಕೊತೀರಿ, ನನ್ ಕೈಲಿ ಯಾವತ್ತೂ ತಕ್ಕಡಿ ಇರುತ್ತೆ, ನಾನು ನಿಮಗೆ ಹೆಲ್ಪ್ ಮಾಡ್ತೀನಿ ಎಲ್ಲಿ ಆ ಮೀನ್ ತನ್ನಿ! ಬೆಕ್ಕುಗಳು ಮೀನು ತಂದಿಟ್ಟವು, ಕೋತಿ ಅದನ್ನ ಡಿವೈಡ್ ಮಾಡಿ ಎರಡೂ ತುಂಡುಗಳನ್ನ ತಕ್ಕಡಿಯ ಎರಡು ತಟ್ಟೆಗಳಿಗೆ ಹಾಕಿತು, ಆಗ ಒಂದು ತಟ್ಟೆ ಮೇಲ್ ಹೋಗಿ ಇನ್ನೊಂದು ಕೆಳ್ಗ್ ಹೋಯ್ತು. ಕೋತಿ ಆ ಮೇಲ್ ಹೋದ ತಟ್ಟೆಲಿದ್ದ ಪೀಸನ್ನ ಗಬಕ್ಕ್ ಅಂತ ಬಾಯಿಗಾಕ್ಕೊಂಡು ಇನ್ನೊಂದು ತಟ್ಟೇಲಿದ್ದ ಮೀನನ್ನ ಮತ್ತೆ ಡಿವೈಡ್ ಮಾಡ್ತು, ಮಾಡಿ ಮತ್ತೆ ತಟ್ಟೆಗಳಿಗೆ ಹಾಕ್ತು, ಈಗ ಮತ್ತೆ ಒಂದು ತಟ್ಟೆ ಮೇಲ್ ಹೋಯ್ತು! ಒಂದ್ ತಟ್ಟೆ ಕೆಳ್ಗ್ ಹೋಯ್ತು, ಮೇಲ್ ಹೋಗಿದ್ದ ತಟ್ಟೆಯ ಮೀನಿನ ತುಂಡನ್ನ ಕೋತಿ ಗುಳುಂಕ್ ಎಂದು ಬಾಯಿಗೆ ಹಾಕ್ಕೊಂಡು ಉಳಿದಿದ್ ತಟ್ಟೆ ಮೀನನ್ನ ಮತ್ತೆ ಡಿವೈಡ್ ಮಾಡ್ತು.
ಹೀಗೆ ಡಿವೈಡ್ ಮಾಡಿ, ಗುಳುಂಕ್ ಮಾಡಿ, ಡಿವೈಡ್ ಮಾಡಿ, ಗುಳುಂಕ್ ಮಾಡಿ, ಕೊನೆಗೆ ಆ ಕೋತಿ ಇಡೀ ಕಾಣೆ ಮೀನನ್ನ ನುಂಗಿ ನೀರುಕುಡೀತು. ಅದು ಹೀಗೆ ಡಿವೈಡ್ ಮಾಡಿ, ಗುಳುಂಕ್ ಮಾಡಿ, ಡಿವೈಡ್ ಮಾಡಿ, ಗುಳುಂಕ್ ಮಾಡೋದನ್ನ ಐದು ವರ್ಷ ನೋಡ್ತ ಕೂತಿದ್ದ ಬೆಕ್ಕುಗಳು ಕೊನೆಗೆ ಬಂದ ದಾರಿಗೆ ಸುಂಕವಿಲ್ಲ ಅನ್ನೋದ್ ಅರ್ಥ ಆಗಿ ಸೈಲೆಂಟಾಗಿ ಎದ್ದು ಹೋದವು. ಹೊಟ್ಟೆ ತುಂಬಿದ ಕೋತಿ, ಈ ತಿಂದ ಪಾಪವನ್ನು ತಿರುಗಿ ಪರಿಹಾರ ಮಾಡ್ಕೋಬೇಕು ಅಂತ ಹೇಳಿ ಪುಣ್ಯಕ್ಷೇತ್ರಗಳ ದರ್ಶನಕ್ಕೆ ಹೊರಟಿತು. ಅಂದಹಾಗೆ ಇದು ನಮ್ ಎದುರುಮನೆ ಪುಟ್ಟಿ ಸೌಪರ್ಣಿಕಳ ಎರಡನೆ ಕ್ಲಾಸ್ ಕನ್ನಡ ಟೆಕ್ಸ್ಟ್ ಬುಕ್ಕಲ್ಲಿರೋ ಕತೆ ಕಣ್ರಿ. ಪುಟ್ಟಿ ಈ ಕತೆ ಓದಿ 'ಅಂಕಲ್, ಇದ್ರಲ್ಲಿ ಬರೋ ಆ ಕೋತಿ ಹೆಸ್ರೇನ್ಗೊತ್ತಾ?' ಅಂತ ಕೇಳಿ, ನನ್ನನ್ನು ದಿಗಿಲುಗೊಳಿಸಿ, ಒಂದು ನಿಮಿಷ ಮೌನಾಚರಣೆ ಮಾಡಿ, ನಂತರ ದೊಡ್ಡದಾಗಿ 'ಡಿವೈಡರ್ರ್ರ್ರ್ರ್' ಅಂತ ಹೇಳಿ ಗಟ್ಟಿಯಾಗಿ ನಕ್ಕಳು.
ಕಥೆ ಹೇಳಿದ್ದು ರೋಹಿತ್ ಚಕ್ರತೀರ್ಥ
Comments