ಪಕ್ಷೇತರರಾಗಿ ನಿಂತು ಗೆದ್ದು ಬನ್ನಿ ನೋಡೋಣ'' : ಸಿಎಂಗೆ ಎಚ್ ಡಿಕೆ ಸವಾಲ್
''ನಿಮಗೆ ನೆಲ ಕಾಣುತ್ತಿಲ್ಲ, ದುಡ್ಡಿನ ಮದ ಏರಿದೆ. ನೀವು ಪಕ್ಷೇತರರಾಗಿ ನಿಂತು ಗೆದ್ದು ಬನ್ನಿ ನೋಡೋಣ'' ಎಂದು ಜೆಡಿಎಸ್ ರಾಜ್ಯಾಧ್ಯಕ್ಷ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸವಾಲು ಹಾಕಿದರು. ವಿಕಾಸ ಪರ್ವ ಯಾತ್ರೆ ಅಂಗವಾಗಿ ಜಿಲ್ಲಾ ಆಟದ ಮೈದಾನದಲ್ಲಿ ನಡೆದ ಜೆಡಿಎಸ್ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು ಭಾಷಣದುದ್ದಕ್ಕೂ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು.
ಜೆಡಿಎಸ್ ಗೆ ಭವಿಷ್ಯವಿಲ್ಲ ಎಂದು ಹೇಳಿರುವ ಸಿದ್ದರಾಮಯ್ಯ, ಈ ಪಕ್ಷದ ಕಾರ್ಯಕರ್ತರ ಬೆನ್ನಿಗೆ ಚೂರಿ ಹಾಕಿ ಕಾಂಗ್ರೆಸ್ ಬಾಗಿಲಲ್ಲಿ ನಿಂತು 250 ಮತಗಳ ಅಂತರದಿಂದ ಗೆದ್ದು ಮುಖ್ಯಮಂತ್ರಿಯಾಗಿದ್ದಾರೆ. ರಾಜ್ಯದ ಆರೂವರೆ ಕೋಟಿ ಜನ ಮತದಾರರು ತಮ್ಮ ಜೇಬಿನಲ್ಲಿದ್ದಾರೆಂದುಕೊಂಡಿದ್ದಾರೆ ಎಂದು ಟೀಕಿಸಿದರು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಬಗ್ಗೆ ಏಕವಚನದಲ್ಲಿ ಮಾತನಾಡುತ್ತೀರಾ?, ನಿಮ್ಮ ವಯಸ್ಸೆಷ್ಟು? ಅವರಿಗೆ ಎಷ್ಟುವಯಸ್ಸಾಗಿದೆ? ಹಿಂದಿನದೆಲ್ಲಾ ಮರೆತು ಬಿಟ್ರಾ ಎಂದು ಪ್ರಶ್ನಿಸಿದ ಕುಮಾರಸ್ವಾಮಿಯವರು, 100 ಜನ ಸಿದ್ದರಾಮಯ್ಯ ಬಂದ್ರೂ ಜೆಡಿಎಸ್ ನಾಶ ಮಾಡಲು ಸಾಧ್ಯವಿಲ್ಲ. ರಾಜ್ಯದ ಆರು ಕೋಟಿ ಜನರ ದುಡ್ಡನ್ನು ಲೂಟಿ ಮಾಡಿ ಅದರಲ್ಲಿ ಗೆಲ್ಲಲು ಹೊರಟಿದ್ದೀರಾ ಎಂದು ಕಿಡಿಕಾರಿದರು.
ಸಿದ್ದರಾಮಯ್ಯ ಸಿಎಂ ಆಗಬೇಕೆಂದು ಕುರುಬ ಸಮಾಜದವರು ಮನೆಯಲ್ಲಿದ್ದ ತಲಾ ಎರಡೆರಡು ಕುರಿಗಳನ್ನು ಮಾರಾಟ ಮಾಡಿ ಹಣ ಕೊಟ್ಟರು. ಇದರ ಕೃತಜ್ಞತೆ ಸಿದ್ದರಾಮಯ್ಯ ಅವರಿಗಿಲ್ಲ. ಚಿಕ್ಕಮಗಳೂರಿನಲ್ಲಿ ಡಿವೈಎಸ್ಪಿಯಾಗಿದ್ದ ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆ ಮಾಡಿಕೊಂಡರು. ಅವರು ಕುರುಬ ಸಮಾಜಕ್ಕೆ ಸೇರಿದವರು. ಅವರ ಕುಟುಂಬದ ನೆರವಿಗೆ ನಾನು ಬರಬೇಕಾಯಿತು. ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸೇರಿ ಹಂಡಿಭಾಗ್ ಅವರಿಗೆ ಬೆದರಿಕೆ ಹಾಕಿದ್ದು ಯಾರೆಂಬುದು ಹೇಳಬೇಕು. ಕುರುಬ ಸಮಾಜಕ್ಕಾಗಿ ಮಾಡಿರುವ ಒಳ್ಳೆಯ ಯಾವುದಾದರೂ ಕೆಲಸ ಇದ್ದರೆ ಹೇಳಿ ಎಂದರು. ಲಿಂಗಾಯತ ಸಮಾಜವನ್ನು ಒಡೆಯುವ ಕೆಲಸ ಮಾಡಿದ್ದೀರಾ. ಇದಕ್ಕೆ ಮುಂದಿನ ದಿನಗಳಲ್ಲಿ ಈ ಸಮಾಜದವರು ತಕ್ಕ ಉತ್ತರ ನೀಡುತ್ತಾರೆ ಎಂದು ಹೇಳಿದರು. ಇದೇ ವೇಳೆ ಕುಮಾರಸ್ವಾಮಿ ರೋಡ್ ಶೋ ನಡೆಸಿದರು.
Comments