ರಾಜ್ಯಸಭಾ ಚುನಾವಣೆಗೆ ಕಮಲದ ದಳಕ್ಕೆ ಗಾಳ ಹಾಕಿರುವ ದೇವೇಗೌಡ್ರು

ರಾಜ್ಯಸಭಾ ಚುನಾವಣೆ ಗೆಲುವಿಗೆ ಭರ್ಜರಿ ರಾಜಕೀಯ ತಂತ್ರಗಾರಿಕೆ ಹೆಣೆದಿರುವ ಜೆಡಿಎಸ್, ಇದೀಗ ಬಿಜೆಪಿ ಬುಟ್ಟಿಯಲ್ಲಿರುವ ಹೆಚ್ಚುವರಿ ಮತಗಳು ಹಾಗೂ ಪಕ್ಷೇತರರಿಗೆ ಗಾಳ ಹಾಕಿದೆ. ಈ ಚುನಾವಣೆಗೆ ಮೂಲಕ ತಮ್ಮ ರಾಜಕೀಯ ವೈರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಕ್ಕ ಪಾಠ ಕಲಿಸಲು ಜೆಡಿಎಸ್ ತಂತ್ರಕ್ಕೆ ಬಿಜೆಪಿ ಸಹ ಸಾಥ್ ನೀಡುವ ಸಾಧ್ಯತೆಗಳಿವೆ ಎಂಬ ಮಾತುಗಳು ಕೇಳಿ ಬಂದಿದೆ.
ರಾಜ್ಯಸಭೆಯ ನಾಲ್ಕನೇ ಸ್ಥಾನಕ್ಕೆ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ಹುರಿಯಾಳುಗಳ ನೇರಾನೇರ ಸ್ಪರ್ಧೆ ಉಂಟಾಗಿದೆ. ಆದರೆ ವಾಸ್ತವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಜೆಡಿಎಸ್ ಪರಮೋಚ್ಚ ನಾಯಕ ಎಚ್.ಡಿ.ದೇವೇಗೌಡ ಕುಟುಂಬದ ನಡುವೆ ಕಾಳಗ ಏರ್ಪಟ್ಟಿದೆ. ಮುಖ್ಯಮಂತ್ರಿಯ ವಿರೋಧಿಗಳನ್ನು ಕ್ರೋಡೀಕರಿಸಿ ಸೇಡು ತೀರಿಸಿಕೊಳ್ಳಲು ದೇವೇಗೌಡ ಅವರು ದಾಳ ಉರುಳಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಬಿಜೆಪಿಯ ಹೆಚ್ಚುವರಿ ಮತ ಮತ್ತು ಪಕ್ಷೇತರ ಮತಗಳನ್ನು ಸೆಳೆಯುವ ನಿಟ್ಟಿನಲ್ಲಿ ಕಾರ್ಯತಂತ್ರ ಹೆಣೆಯಲಾಗುತ್ತಿದೆ. ಪಕ್ಷದ ಮುಖಂಡ ಎಚ್.ಡಿ.ರೇವಣ್ಣ ನೇತೃತ್ವದಲ್ಲಿ ಮತಬೇಟೆ ಕಾರ್ಯ ತೆರೆಮರೆಯಲ್ಲಿ ನಡೆಯುತ್ತಿದ್ದು, ಈ ಮೂಲಕ ಕಾಂಗ್ರೆಸ್ ಗೆ ತಿರುಗೇಟು ನೀಡುವ ರಾಜಕೀಯ ತಂತ್ರ ರೂಪಿಸಲಾಗುತ್ತಿದೆ. ಜೆಡಿಎಸ್ ಪಕ್ಷದ ಅಭ್ಯರ್ಥಿ ಬಿ.ಎಂ. ಫಾರೂಕ್ ಗೆಲುವಿಗೆ ರಣತಂತ್ರ ರೂಪಿಸುವಲ್ಲಿ ಪಕ್ಷವು ತೊಡಗಿದೆ. ಬಿಜೆಪಿಯ ಹೆಚ್ಚುವರಿ ಮತ ಮತ್ತು ಪಕ್ಷೇತರ ಮತಗಳನ್ನು ಸೆಳೆಯಲು ಕುದುರೆ ವ್ಯಾಪಾರ ಆರಂಭಗೊಂಡಿದೆ ಎಂದು ಹೇಳಲಾಗಿದೆ. ಬಿಜೆಪಿ ಮತ್ತು ಪಕ್ಷೇತರ ಅಭ್ಯರ್ಥಿಗಳಿಗೆ ಗಾಳ ಹಾಕಲು ದೇವೇಗೌಡ್ರು ಮುಂದಾಗಿದ್ದಾರೆ. ಬಿಜೆಪಿ 4 ಮತ್ತು ಪಕ್ಷೇತರ ಅಭ್ಯರ್ಥಿ 9 ಮಂದಿ ಇದ್ದಾರೆ. ಈ ಪೈಕಿ ಪಕ್ಷೇತರ ಶಾಸಕರಾದ ಖಾನಾಪುರದ ಅರವಿಂದ ಚಂದ್ರಕಾಂತ್ ಪಾಟೀಲ್, ಕೋಲಾರದ ವರ್ತೂರು ಪ್ರಕಾಶ್, ಬೆಳಗಾವಿ ದಕ್ಷಿಣದ ಸಂಭಾಜಿ ಲಕ್ಷ್ಮಣ್ ಪಾಟೀಲ್ ಅವರನ್ನು ಸೆಳೆಯಲು ಜೆಡಿಎಸ್ ಕಸರತ್ತು ನಡೆಸುತ್ತಿದೆ. ಜೆಡಿಎಸ್ ನ ಬಂಡಾಯ ಶಾಸಕರನ್ನು ಕಾನೂನಿನ ಮೂಲಕ ಕೈ ಕಟ್ಟಿಹಾಕುವ ಪ್ರಯತ್ನಕ್ಕೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ನಿರ್ಧರಿಸಿದ್ದಾರೆ. ಬಿಜೆಪಿಯ ಹೆಚ್ಚುವರಿ ಮತ್ತು ಪಕ್ಷೇತರರ ಮತಗಳನ್ನು ಸೆಳೆಯುವಲ್ಲಿ ಜೆಡಿಎಸ್ ಯಶಸ್ವಿಯಾದರೆ ಪಕ್ಷದ ಅಭ್ಯರ್ಥಿ ಗೆಲುವು ಸಾಧಿಸಬಹುದು ಎಂಬ ಲೆಕ್ಕಾಚಾರ ನಡೆಸಲಾಗುತ್ತಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
Comments