ದೇಶದಲ್ಲಿ ಶೀಘ್ರವೇ ತೃತೀಯ ಶಕ್ತಿ ಉದಯ : ಎಚ್ ಡಿಡಿ ಭವಿಷ್ಯ

ದೇಶದಲ್ಲಿ ಶೀಘ್ರವೇ ತೃತೀಯ ಶಕ್ತಿ ಉದಯಿಸಲಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಭವಿಷ್ಯ ನುಡಿದಿದ್ದಾರೆ. ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಿಎಸ್ಪಿ ನಾಯಕಿ ಮಾಯಾವತಿ ಅವರು ದೇಶದಲ್ಲಿ ಪ್ರಾದೇಶಿಕ ಪಕ್ಷಗಳನ್ನು ಒಗ್ಗೂಡಿಸುತ್ತಿದ್ದಾರೆ. ಅವರ ಯತ್ನಕ್ಕೆ ಶೀಘ್ರದಲ್ಲೇ ಹೊಸ ರೂಪ ಬರಲಿದೆ ಎಂದು ಅವರು ಹೇಳಿದರು. ಮಾಯಾವತಿ ಅವರು ಪ್ರಾದೇಶಿಕ ಶಕ್ತಿಗಳನ್ನು ಒಗ್ಗೂಡಿಸುವಲ್ಲಿ ಕಾಂಗ್ರೆಸ್ ಗಿಂತ ಮುಂದಿದ್ದಾರೆ ಎಂದು ನುಡಿದರು.
ದೇಶದಲ್ಲಿ ಕಾಂಗ್ರೆಸ್ ಶಕ್ತಿ ಕ್ಷೀಣಿಸುತ್ತಿದೆ ಎಂಬುದು ಉತ್ತರ ಪ್ರದೇಶ ಮತ್ತು ಬಿಹಾರದ ಲೋಕಸಭೆ ಹಾಗೂ ವಿಧಾನಸಭೆ ಉಪ ಚುನಾವಣೆಯ ಫಲಿತಾಂಶದಿಂದ ಸ್ಪಷ್ಟವಾಗುತ್ತದೆ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಹೇಳಿದ್ದಾರೆ. ಉತ್ತರ ಭಾರತದ ರಾಜ್ಯಗಳ ಉಪ ಚುನಾವಣೆಗಳಲ್ಲಿ ಬಿಜೆಪಿಗೂ ಸೋಲಾಗಿದೆ. ಇದು ರಾಷ್ಟ್ರ ರಾಜಕಾರಣದ ಮೇಲೆ ಪ್ರಭಾವ ಬೀರಲಿದ್ದು, ತೃತೀಯ ಶಕ್ತಿಗೆ ಒಂದು ರೂಪ ಸಿಗಬಹುದು ಎಂದಿದ್ದಾರೆ. ಬಿಎಸ್ಪಿ ಮುಖ್ಯಸ್ಥೆ ಮಯಾವತಿ ಪ್ರಭಾವಿ ದಲಿತ ಮಹಿಳೆ ಎಂಬ ಕಾರಣಕ್ಕೆ ನಾನೇ ಅವರ ಮನೆಗೆ ಭೇಟಿ ನೀಡಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯನ್ನು ದೂರ ಇಟ್ಟೇ ಜನರ ಬಳಿ ಹೋಗುತ್ತೇವೆ ಎಂದು ದೇವೇಗೌಡರು ತಿಳಿಸಿದ್ದಾರೆ. ಭಿನ್ನಮತೀಯ ಶಾಸಕರ ಅನರ್ಹತೆ ವಿಷಯಕ್ಕೆ ಸಂಬಂಧಿಸಿ ಹೈಕೋರ್ಟ್ ಮೊರೆ ಹೋಗುತ್ತೇವೆ. ಅವರು ಈ ಬಾರಿಯೂ ಕಾಂಗ್ರೆಸ್ ಗೆ ಮತ ಎಂದಿರುವುದು ಉದ್ಧಟತನ ಎಂದು ದೇವೇಗೌಡ ಹೇಳಿದರು.ಇದೇ ವೇಳೆ ಪ್ರತ್ಯೇಕ ಲಿಂಗಾಯತ ಧರ್ಮದ ಬಗ್ಗೆ ಪ್ರತಿಕ್ರಿಯಿಸಿದ ಜೆಡಿಎಸ್ ವರಿಷ್ಠ, ಪ್ರತ್ಯೇಕ ಧರ್ಮಕ್ಕೆ ನಾವು ಮುಂದಾಗಿಲ್ಲ. ಎಲ್ಲ ಸ್ವಾಮೀಜಿಗಳ ಜತೆಯೂ ಗೌರವದಿಂದ ನಡೆದುಕೊಂಡಿದ್ದೇವೆ ಎಂದರು.
Comments