ವಿಧಾನಪರಿಷತ್ ಚುನಾವಣಾ ಅಖಾಡಕ್ಕಿಳಿಯಲು ಎಚ್ ಡಿಡಿ ರಣತಂತ್ರ
ವಿಧಾನ ಸಭಾ ಚುನಾವಣೆ ಭರ್ಜರಿ ತಯಾರಿಯಲ್ಲಿರುವ ಜೆಡಿಎಸ್ ಈಗಾಗಲೇ ಅನೇಕ ಸಮಾವೇಶಗಳ ಮೂಲಕ ರಾಷ್ಟ್ರೀಯ ಪಕ್ಷಗಳಿಗೆ ನಡುಕ ಹುಟ್ಟಿಸಿದೆ. ಜೆಡಿಎಸ್ ನ ದಳಪತಿ ಎಚ್ ಡಿ ದೇವೇಗೌಡರ ಚುನಾವಣಾ ತಂತ್ರಕ್ಕೆ ವಿಪಕ್ಷಗಳು ಸೋಲು ಕಾಣುವುದರಲ್ಲಿವೆ. ಇದೀಗ ವಿಧಾನ ಪರಿಷತ್ ಚುನಾವಣೆಗೆ ಎಚ್ ಡಿ ದೇವೇಗೌಡರು ಆರು ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಆದೇಶ ಹೊರಡಿಸಿದ್ದಾರೆ.
ಜೂನ್ ನಡೆಯಲಿರುವ ಶಿಕ್ಷಕರು ಮತ್ತು ಪದವೀಧರ ಕ್ಷೇತ್ರದ ವಿಧಾನಪರಿಷತ್ ನ ಆರು ಸ್ಥಾನಗಳಿಗೆ ಜೆಡಿಎಸ್ ಪಕ್ಷವು ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ. ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಉಪಸಭಾಪತಿ ಮರಿತಿಬ್ಬೇಗೌಡ, ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ರಮೇಶ್ ಬಾಬು, ನೈಋುತ್ಯ ಶಿಕ್ಷಕರ ಕ್ಷೇತ್ರದಿಂದ ಎಸ್.ಎಲ್. ಭೋಜೇಗೌಡ ಅವರನ್ನು ಪಕ್ಷದ ಅಧಿಕೃತ ಅಭ್ಯರ್ಥಿಗಳೆಂದು ಘೋಷಣೆ ಮಾಡಲಾಗಿದೆ. ಬೆಂಗಳೂರು ಪದವೀಧರ ಕ್ಷೇತ್ರದಿಂದ ಎಲ್.ಆರ್. ಶಿವರಾಮೇಗೌಡ, ಈಶಾನ್ಯ ಪದವೀಧರ ಕ್ಷೇತ್ರದಿಂದ ಎನ್.ಪ್ರತಾಪ್ ರೆಡ್ಡಿ, ನೈಋುತ್ಯ ಪದವೀಧರ ಕ್ಷೇತ್ರದಿಂದ ಅಶ್ವಿನ್ ಪೆರಾರ ಅವರು ಕಣಕ್ಕಿಳಿಯಲಿದ್ದಾರೆ ಎಂದು ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡ ಆದೇಶ ಹೊರಡಿಸಿದ್ದಾರೆ.
ಸತತ ಮೂರು ಬಾರಿ ಗೆಲುವು ಸಾಧಿಸಿ ಪರಿಷತ್ ಗೆ ಪ್ರವೇಶಿಸಿರುವ ಉಪಸಭಾಪತಿ ಮರಿತಿಬ್ಬೇಗೌಡ ಅವರು ನಾಲ್ಕನೇ ಬಾರಿಯೂ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಅಖಾಡಕ್ಕಿಳಿಯಲಿದ್ದಾರೆ. ಮರಿತಿಬ್ಬೇಗೌಡ ಕಾಂಗ್ರೆಸ್ ನ ಲಕ್ಷ್ಮಣ್ ವಿರುದ್ಧ ಗೆಲುವು ಸಾಧಿಸಿದ್ದರು. 2016ರಲ್ಲಿ ಉಪಚುನಾವಣೆ ಮೂಲಕ ಪರಿಷತ್ ಪ್ರವೇಶ ಪಡೆದ ಜೆಡಿಎಸ್ ವಕ್ತಾರ ರಮೇಶ್ ಬಾಬು ಮತ್ತೊಮ್ಮೆ ಪರೀಕ್ಷೆಗಿಳಿಯಲಿದ್ದಾರೆ. ಉಪಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ಇದ್ದು, 10 ಸಾವಿರ ಮತಗಳನ್ನು ಪಡೆದು ಎದುರಾಳಿ ವಿರುದ್ಧ ನಾಲ್ಕು ಸಾವಿರ ಮತಗಳ ಅಂತರದಲ್ಲಿ ಜಯಗಳಿಸಿದ್ದರು. ನೈಋುತ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯಾಗಿರುವ ವಕೀಲ ಎಸ್.ಎಲ್. ಭೋಜೇಗೌಡ ಅವರು ಕಳೆದ ಬಾರಿ ಪದವೀಧರ ಕ್ಷೇತ್ರದಿಂದ ಸ್ಪರ್ಧಿಸಲು ಪ್ರಯತ್ನಿಸಿದ್ದರು. ಆದರೆ, ಟಿಕೆಟ್ ಸಿಕ್ಕಿರಲಿಲ್ಲ. ಹೀಗಾಗಿ ಮೊದಲ ಬಾರಿಗೆ ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಅಖಾಡಕ್ಕಿಳಿಯಲಿದ್ದಾರೆ. ಮಾಜಿ ಶಾಸಕ ಎಲ್.ಆರ್.ಶಿವರಾಮೇಗೌಡ, ಎನ್.ಪ್ರತಾಪ್ ರೆಡ್ಡಿ ಮತ್ತು ಅಶ್ವಿನ್ ಪೆರಾರ ಅವರು ಮೊದಲ ಬಾರಿಗೆ ಪಕ್ಷದಿಂದ ಕಣಕ್ಕಿಳಿಯುತ್ತಿದ್ದಾರೆ.
Comments