ಮತದಾರರನ್ನು ಹಳ್ಳಿಯ ಸೊಗಡಿನಲ್ಲೇ ತಲುಪುವ ವಿನೂತನ ಪ್ರಯೋಗದಲ್ಲಿರುವ ಜೆಡಿಎಸ್

08 Mar 2018 10:52 AM |
5020 Report

ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೈಟೆಕ್ ಬಸ್​ನೊಂದಿಗೆ ಪ್ರಚಾರ ಕೈಗೊಂಡರೆ, ಅವರ ಅಭಿಮಾನಿಗಳು, ಕಾರ್ಯಕರ್ತರು ಸೈಕಲ್ ಜಾಥಾ ಮೂಲಕ ಪ್ರಚಾರ ನಡೆಸಲಿದ್ದಾರೆ. ರಾಜ್ಯದ ಎಲ್ಲ 224 ಕ್ಷೇತ್ರಗಳಲ್ಲಿ ಈ ಸೈಕಲ್ ಜಾಥಾ ನಡೆಯಲಿದ್ದು, ಪ್ರತಿ ಕ್ಷೇತ್ರದಲ್ಲಿ 50 ಮಂದಿ ಕಾರ್ಯಕರ್ತರು ಸೈಕಲ್ ಜಾಥಾದಲ್ಲಿ ಭಾಗವಹಿಸಲಿದ್ದಾರೆ. 11,200 ಮಂದಿ ಈ ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದು, ಪ್ರತಿ ನಿತ್ಯ ಒಬ್ಬ ಸೈಕಲ್ ಪ್ರಚಾರಕ 15 ಹಳ್ಳಿಗೆ ಭೇಟಿ ನೀಡಲಿದ್ದಾರೆ.

ಪ್ರತಿ ಸೈಕಲ್​ನಲ್ಲಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ, ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಹಾಗೂ ಆಯಾ ಕ್ಷೇತ್ರದಲ್ಲಿ ಸ್ಪರ್ಧಿಸುವ ಅಭ್ಯರ್ಥಿಯ ಭಾವಚಿತ್ರಗಳಿರುತ್ತವೆ. ಈ ಪ್ರಚಾರಕರು ಪಕ್ಷದ ಕರಪತ್ರ, ಭಿತ್ತಿಪತ್ರಗಳನ್ನು ಹಂಚಲಿದ್ದಾರೆ. ಬೂತ್ ಮಟ್ಟದ ಸಮಿತಿ ಹಾಗೂ ಎಚ್​ಡಿಕೆ ಅಭಿಮಾನಿಗಳ ಮೂಲಕ ಸೈಕಲ್ ಜಥಾ ನಡೆಸಿ ಮತದಾರ ಮುಟ್ಟಲಿದ್ದಾರೆ. ಈ ಮೂಲಕ ಗ್ರಾಮೀಣ ಮತದಾರರನ್ನು ಹಳ್ಳಿಯ ಸೊಗಡಿನಲ್ಲೇ ತಲುಪುವ ವಿನೂತನ ಪ್ರಯೋಗ ಇದಾಗಿದೆ.

ರಾಜ್ಯದಲ್ಲಿ ಎಲ್ಲೇ ಜೆಡಿಎಸ್​ನ ವಿಕಾಸ ಯಾತ್ರೆ, ಸಭೆ, ಸಮಾರಂಭ ಮಾಡಿದರೂ ಅದೆಲ್ಲ ಫೇಸ್​ಬುಕ್​ನಲ್ಲಿ ಲೈವ್ ಆಗುತ್ತದೆ. ವಿಶೇಷವೆಂದರೆ, ಎಚ್​ಡಿಕೆ ಫೇಸ್​ಬುಕ್​ನಲ್ಲಿ 2.50 ಲಕ್ಷ ಹಿಂಬಾಲಕರು ಇದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಜೆಡಿಎಸ್ ವಾಯ್ಸ್​ ಮೆಸೇಜ್ ಪ್ರಚಾರ ಆರಂಭಿಸಲಿದ್ದು, ಈ ಮೂಲಕ ಪ್ರತಿ ನಿತ್ಯ, ‘ನಾನು ಕುಮಾರಸ್ವಾಮಿ ಮಾತನಾಡುತ್ತಿದ್ದೇನೆ., ದಯವಿಟ್ಟು ಈ ಬಾರಿ ಜೆಡಿಎಸ್ ಬೆಂಬಲಿಸಿ, ‘ನೀವು ಅಧಿಕಾರ ಕೊಟ್ಟರೆ, ನಾನು ಸಿಎಂ ಅಲ್ಲ, ನೀವೇ ಸಿಎಂ, ನಿಮ್ಮ ಅಣತಿಯಂತೆ ಆಡಳಿತ ನಡೆಸಲು ಬದ್ಧ’ ‘ಕುಮಾರಸ್ವಾಮಿ ಅಧಿಕಾರಕ್ಕೆ ಬಂದ 24 ಗಂಟೆಯಲ್ಲೇ ರೈತರ ಸಾಲ ಮನ್ನಾ’, ‘ಹಿರಿಯ ನಾಗರಿಕರಿಗೆ ಪ್ರತಿ ತಿಂಗಳು 5 ಸಾವಿರ ರೂ. ಮಾಸಾಶನ’ ಎಂಬ ಮೆಸೇಜ್ ಹರಿ ಬಿಡಲಾಗುತ್ತದೆ. ಇನ್ನು ಮುಂದೆ ಕುಮಾರಸ್ವಾಮಿ ಅವರು ವಾರಕ್ಕೆ ಒಂದು ದಿನ ಅರ್ಧ ಗಂಟೆ ಫೇಸ್​ಬುಕ್ ಲೈವ್ ನಡೆಸಲಿದ್ದಾರೆ. ಆಯಾ ವಾರದಲ್ಲಿನ ಪ್ರಚಲಿತ ವಿದ್ಯಮಾನಗಳ ಬಗ್ಗೆ ಪ್ರತಿಕ್ರಿಯಿಸಲಿದ್ದಾರೆ.

Edited By

Shruthi G

Reported By

hdk fans

Comments