ವರುಣಾ ಕ್ಷೇತ್ರದಲ್ಲಿ ಸಿದ್ದು ಪುತ್ರನಿಗೆ ಸೆಡ್ಡು ಹೊಡೆಯಲು ಜೆಡಿಎಸ್ ಸಜ್ಜು..!!
ಮುಖ್ಯಮಂತ್ರಿ ಸಿದ್ದರಾಮಯ್ಯ ತವರು ಕ್ಷೇತ್ರ ವರುಣಾದಲ್ಲಿ ಜೆಡಿಎಸ್ ಶಕ್ತಿ ಪ್ರದರ್ಶನಕ್ಕೆ ಸಜ್ಜಾಗಿದ್ದು, ಮಾರ್ಚ್ 9ಕ್ಕೆ ವರುಣಾ ವಿಧಾನಸಭಾ ಕ್ಷೇತ್ರದ ಎಸ್. ಹೊಸಕೋಟೆಯಲ್ಲಿ ವಿಕಾಸ ಪರ್ವ ಯಾತ್ರೆಗೆ ಜೆಡಿಎಸ್ ಚಾಲನೆ ನೀಡಲಿದೆ. ವರುಣಾ ಕ್ಷೇತ್ರದ ಸಂಭವನೀಯ ಅಭ್ಯರ್ಥಿ- ಮುಖ್ಯಮಂತ್ರಿ ಮಗ ಯತೀಂದ್ರಗೆ ಟಾಂಗ್ ಕೊಡಲು ಹೊಸ ಮುಖ ಅಭಿಷೇಕ್ಗೆ ಜೆಡಿಎಸ್ ಮಣೆ ಹಾಕಿದೆ. ಜೆಡಿಎಸ್ ಟಿಕೆಟ್ ಖಾತ್ರಿಯಾಗುತ್ತಿದ್ದಂತೆ ಕಾಂಗ್ರೆಸ್ ವಿರುದ್ಧ ಮುಗಿಬಿದ್ದಿರುವ ಎಸ್. ಎಂ. ಅಭಿಷೇಕ್, ಮುಖ್ಯಮಂತ್ರಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಕ್ಷೇತ್ರದಲ್ಲೇ ಅಭಿವೃದ್ದಿ ಮರೀಚಿಕೆಯಾಗಿದೆ. ಹೀಗಾಗಿ ಈ ಬಾರಿ ಚುನಾವಣೆಯಲ್ಲಿ ವರುಣಾದಲ್ಲಿ ಅಚ್ಚರಿ ಫಲಿತಾಂಶ ಬರಲಿದೆ. ವಿಧಾನಸಭಾ ಚುನಾವಣೆಯಲ್ಲಿ ವರುಣಾ ಕ್ಷೇತ್ರದ ಜನ ನನಗೆ ಆಶೀರ್ವಾದ ಮಾಡಲಿದ್ದಾರೆ. ಕುಮಾರಸ್ವಾಮಿ 20 ತಿಂಗಳು ನಡೆಸಿದ ಆಡಳಿತ ನನಗೆ ಶ್ರೀರಕ್ಷೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ವರುಣಾದಲ್ಲಿ ಸರಕಾರಿ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನವಾಗಿಲ್ಲ, ಮೂಲಸೌಲಭ್ಯಗಳು ಇಲ್ಲ, ರೈತರ ಸಮಸ್ಯೆಗಳನ್ನು ಆಲಿಸುವವರು ಇಲ್ಲ. ಇವೆಲ್ಲವನ್ನೂ ಕಳೆದ 6 ತಿಂಗಳ ಕಾಲ ಗ್ರಾಮವಾಸ್ತವ್ಯ ನಡೆಸುವ ಮೂಲಕ ಕ್ಷೇತ್ರದಲ್ಲಿರುವ ಜ್ವಲಂತ ಸಮಸ್ಯೆಗಳನ್ನು ಗುರುತಿಸಿದ್ದೇನೆ. ಈ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ಪರಿಹಾರಕ್ಕೆ ಶ್ರಮಿಸಲಾಗುವುದು ಎಂದಿದ್ದಾರೆ. ಎಚ್.ಡಿ. ಕುಮಾರಸ್ವಾಮಿ ಅವರು 20 ತಿಂಗಳು ರಾಜ್ಯದಲ್ಲಿ ನಡೆಸಿದ ಆಡಳಿತ ವೈಖರಿ ಜನರಲ್ಲಿ ವಿಶ್ವಾಸ ಮೂಡಿಸಿದೆ. ಆಗಿನ ವಿನೂತನ ಯೋಜನೆ, ದೂರದೃಷ್ಟಿ ನನ್ನಲ್ಲಿ ಪ್ರಭಾವ ಬೀರಿ ವಿದೇಶದಲ್ಲಿದ್ದ ಉನ್ನತ ಹುದ್ದೆಗೆ ರಾಜೀನಾಮೆ ನೀಡಿ, ಈ ಪಕ್ಷಕ್ಕೆ ಸೇರ್ಪಡೆಗೊಂಡಿದ್ದೇನೆ. ಮುಂದಿನ ದಿನಗಳಲ್ಲಿ ವರುಣಾ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುವೆ ಎಂದು ಹೇಳಿದ್ದಾರೆ.
Comments