ದಾವಣಗೆರೆ ಕೆಪಿಜೆಪಿ ಪಕ್ಷದಿಂದ ಅಖಾಡಕ್ಕಿಳಿಯಲಿರುವ ಮಾಜಿ ಶಾಸಕ
2018 ರ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜ್ಯದಲ್ಲಿ ಭಾರಿ ಕುತೂಹಲ ಕೆರಳಿಸುವ ಘಟನೆಗಳು ನಡೆಯುತ್ತಲೇಯಿವೆ. ಒಂದೆಡೆ ಪ್ರಚಾರದಲ್ಲಿ ತೊಡಗಿಕೊಂಡಿರುವ ಪಕ್ಷಗಳು ಮತ್ತೊಂದೆಡೆ ಪಕ್ಷದಿಂದ ಅಭ್ಯರ್ಥಿಗಳ ಪಟ್ಟಿ ಬಿಡುಗಯ ಬಗ್ಗೆ ಗುಸು ಗುಸು ಮಾತುಗಳು ಕೇಳತೊಡಗಿವೆ
ಇದರ ಒಂದು ಭಾಗ ಎಂಬಂತೆ ದಾವಣಗೆರೆಯಲ್ಲಿ ತನ್ನ ಸ್ಥಾನ ಭದ್ರ ಪಡಿಸಿಕೊಳ್ಳಬೇಕು ಎನ್ನುವ ನಿಟ್ಟಿನಲ್ಲಿ ನಟ ಉಪೇಂದ್ರ ರವರ ಕೆಪಿಜೆಪಿ ಪಕ್ಷದಿಂದ ಮಾಜಿ ಶಾಸಕ ಮೋತಿ ವೀರಣ್ಣ ಅವರ ಮಗ ಮೋತಿ ರಾಜೇಂದ್ರರವರಿಗೆ ಟಿಕೆಟ್ ನೀಡುವ ಸಾಧ್ಯತೆ ಹೆಚ್ಚಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಮಧ್ಯ ಕರ್ನಾಟಕದ ಕಾಂಗ್ರೆಸ್ ನ ಪ್ರಭಾವಿ ರಾಜಕಾರಣಿಗಳಾದ ಶಾಮನೂರು ಶಿವಶಂಕರಪ್ಪ ಹಾಗೂ ಎಸ್.ಎಸ್. ಮಲ್ಲಿಕಾರ್ಜುನ್ ರವರ ವಿರುದ್ಧ ಮೋತಿ ರಾಜೇಂದ್ರರನ್ನು ಕಣಕ್ಕೆ ಇಳಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ. ಮಾಜಿ ಶಾಸಕರಾಗಿದ್ದು ಜಿಲ್ಲೆಯಲ್ಲಿ ತನ್ನದೇ ಆದ ವರ್ಚಸ್ಸನ್ನು ಮೋತಿ ವೀರಣ್ಣ ಹೊಂದಿದ್ದಾರೆ.
ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದಲ್ಲಿ ಉತ್ತಮ ಹೆಸರು ಮಾಡಿದ್ದಲ್ಲದೆ ಜನ ಬೆಂಬಲವು ಸಹ ಅವರಿಗೆ ಇದೆ. 2004 ರ ಚುನಾವಣೆಯಲ್ಲಿ ಮೋತಿ ವೀರಣ್ಣನವರು ದಾವಣಗೆರೆಯಿಂದ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ ಶಾಸಕರಾಗಿದ್ದರು. ಜಿಲ್ಲೆಯಲ್ಲಿ ಒಳ್ಳೆಯ ಹೆಸರು ಸಹ ಅವರಿಗಿದೆ. ಇದನ್ನೇ ಲೆಕ್ಕಚಾರ ಮಾಡಿರುವ ನಟ ಉಪೇಂದ್ರ ಮೋತಿ ರಾಜೇಂದ್ರರನ್ನು ಕಣಕ್ಕೆ ಇಳಿಸಲು ಹೊರಟಿದ್ದಾರೆ. ಇನ್ನು ಮೋತಿ ರಾಜೇಂದ್ರ ಹಾಗೂ ನಟ ಉಪೇಂದ್ರ ಆಪ್ತ ಸ್ನೇಹಿತರಾಗಿದ್ದು, ಕೆಲ ಸಿನಿಮಾಗಳಲ್ಲಿ ನಟನೆ ಸಹ ಮಾಡಿದ್ದಾರೆ. ಇದರ ಮಧ್ಯೆ ಭಾನುವಾರ ದಾವಣಗೆರೆಗೆ ಆಗಮಿಸಿದ್ದ ಉಪೇಂದ್ರ ರಾಜೇಂದ್ರರ ಜೊತೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಈ ಸಂದರ್ಭ ತಮ್ಮ ಪಕ್ಷದಿಂದ ಸ್ಪರ್ಧಿಸುವಂತೆ ಆಹ್ವಾನವನ್ನು ನೀಡಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
Comments